ಇದೇನು ಹೊಸ ಸರ್ಕಾರವೋ ಅಥವ ಹಿಂದಿನ ಸರ್ಕಾರವೋ: ಜೆ.ಸಿ.ಮಾಧುಸ್ವಾಮಿ

This is the new government or the previous government: J.C.Madhuswamy

03-07-2018

ಬೆಂಗಳೂರು: ‘ಇದೇನು ಹೊಸ ಸರ್ಕಾರವೋ ಅಥವಾ ಹಿಂದಿನ ಸರ್ಕಾರವೇ ಮುಂದುವರೆದಿದೆಯೋ ಎಂಬ ಗೊಂದಲ ಕಾಡುತ್ತಿದೆ. ಮೊದಲು ಅದನ್ನು ಸ್ಪಷ್ಟಪಡಿಸಿ ಎಂದು ವಿರೋಧ ಪಕ್ಷದ ಶಾಸಕ ಜೆ.ಸಿ.ಮಾಧುಸ್ವಾಮಿ ಛೇಡಿಸಿದ ಘಟನೆ ನಡೆದಿದೆ.

ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕ ಈಶ್ವರ್ ಖಂಡ್ರೆ ಅವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ಅದರ ಪರಿಣಾಮಗಳ ಕುರಿತು ಸುದೀರ್ಘ ವಿವರಣೆ ನೀಡುತ್ತಿದ್ದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಜೆ.ಸಿ.ಮಾಧುಸ್ವಾಮಿ ಅವರು ಬರೀ ಹಳೆ ಸರ್ಕಾರ ಮಾಡಿದ್ದನ್ನೇ ಹೇಳುತ್ತಿದ್ದಾರೆ. ಇದೇನು ಹಿಂದಿನ ಸರ್ಕಾರವೇ ಮುಂದುವರೆದಿದೆಯೋ ಅಥವಾ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆಯೋ ಎಂದು ಛೇಡಿಸಿದರು.

ವಿರೋಧ ಪಕ್ಷದ ಇನ್ನೊಬ್ಬ ಸದಸ್ಯ ಜೆ.ಎಸ್.ಪಾಟೀಲ್ ನಡಹಳ್ಳಿ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜು.5ರಂದು ಬಜೆಟ್ ಮಂಡಿಸುತ್ತಾರೆ. ಅದಕ್ಕೂ ಮೊದಲೇ ನೀವು ಬಜೆಟ್‍ನಲ್ಲಿರುವ ಎಲ್ಲಾ ಕಾರ್ಯಕ್ರಮಗಳನ್ನು ವಿವರಿಸುತ್ತಿರುವಂತಿದೆ ಎಂದು ಲೇವಡಿ ಮಾಡಿದರು.

ಇದಕ್ಕೆ ಉತ್ತರಿಸಿದ ಈಶ್ವರ್ ಖಂಡ್ರೆ, ಹಿಂದಿನ ಸರ್ಕಾರದ ಸಾಧನೆಗಳು ಮತ್ತು ಅದರ ಪರಿಣಾಮಗಳ ಕುರಿತು ವಿವರಣೆ ನೀಡಬೇಕಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿಯ ಮಾರ್ಗದರ್ಶನದಲ್ಲಿ  ಉತ್ತಮವಾಗಿ ನಡೆಯುತ್ತಿದೆ ಎಂದರು.

ಮತ್ತೊಂದು ಹಂತದಲ್ಲಿ ಮಧ್ಯಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಆಡಳಿತ ಪಕ್ಷದ ಶಾಸಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಲಿ. ಬಿಜೆಪಿಯ ಯಾವ ಶಾಸಕರು ವಿರೋಧ ಮಾಡಬೇಡಿ. ಅವರು ಹೇಳಿದ್ದನ್ನು ಗುರುತು ಹಾಕಿಕೊಳ್ಳಿ. ನಾವು ಮಾತನಾಡುವಾಗ ತಕ್ಕ ಉತ್ತರ ನೀಡೋಣ. ನಮಗೆ ಉತ್ತರ ನೀಡುವ ಸಾಮರ್ಥ್ಯ ಇದೆ ಎಂದು ಹೇಳಿದರು. ಅದಕ್ಕೆ ಈಶ್ವರ್ ಖಂಡ್ರೆ ಪ್ರತಿಪಕ್ಷದ ನಾಯಕರಿಗೆ ಧನ್ಯವಾದ ಹೇಳಿದರು.

ಬಿಜೆಪಿ ಶಾಸಕರೊಬ್ಬರು ನಮ್ಮ ನಾಯಕರಿಗೆ ಈಶ್ವರ್ ಖಂಡ್ರೆ ಮೇಲೆ ಪ್ರೀತಿ ಹೆಚ್ಚಾದಂತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಭಾಧ್ಯಕ್ಷ ರಮೇಶ್‍ಕ ಕುಮಾರ್ ಅವರು, ನಿಮ್ಮ ಪ್ರೀತಿ ಹೆಚ್ಚಾಗಿದ್ದಕ್ಕೆ ನಮಗೆ ಈ ಗತಿ ಬಂದಿದೆ ಎಂದು ಹೇಳುವ ಮೂಲಕ ಹಾಸ್ಯದ ಸನ್ನಿವೇಶಕ್ಕೆ ಮತ್ತಷ್ಟು ಇಂಬು ನೀಡಿದರು.


ಸಂಬಂಧಿತ ಟ್ಯಾಗ್ಗಳು

J.C.Madhuswamy vidhanasabha ಸರ್ಕಾರ ವಿರೋಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ