ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

Governor

02-07-2018

ಬೆಂಗಳೂರು: ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಹೊಸ ಯೋಜನೆಗಳು ಹೊರ ಹೊಮ್ಮಲಿವೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

ಹದಿನೈದನೇ ವಿಧಾನಸಭೆಯ ಚೊಚ್ಚಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣಮಾಡಿದ ಅವರು, ಸರ್ಕಾರದ ಮುಂದಿನ ಒಂದು ವರ್ಷದ ದಿಕ್ಕುದಿಸೆಯ ಬಗ್ಗೆ ಮಾಹಿತಿ ನೀಡಿದ ಅವರು, ಅನ್ನದಾತನ ಬದುಕು ಹಸನುಗೊಳಿಸಲು ಕ್ರಮ, ರೈತರ ಬಾಳಿನಲ್ಲಿ ಬೆಳಕಿನ ಹೊಂಗಿರಣ ಮೂಡಿಸಲು ಹೊಸ ಯೋಜನೆ ಜಾರಿ, ಬಾಲ ಕಾರ್ಮಿಕ ಮುಕ್ತ ರಾಜ್ಯ ನಿರ್ಮಾಣ, ನೀಲಿ ಕ್ರಾಂತಿ ಯೋಜನೆ ಅನುಷ್ಠಾನ, ಭದ್ರತಾ ನೀತಿ ಜಾರಿ ಸೇರಿದಂತೆ ಸರ್ಕಾರ ಸಾಗಲಿರುವ ಹಾದಿಯನ್ನು ಅನಾವರಣಗೊಳಿಸಿದರು.

ಅನ್ನದಾನತನ ಬದುಕು ಹಸನುಗೊಳಿಸಲು ಸರ್ಕಾರ ಮಾನವೀಯತೆಯ ಚೌಕಟ್ಟಿನಲ್ಲಿ ನಿಲುವು ನಿರ್ಧಾರಗಳನ್ನು ಪ್ರಕಟಿಸಲಿದೆ. ಹಿಂದಿನ ಸರ್ಕಾರದ ಪರಿಣಾಮಕಾರಿ ಯೋಜನೆಗಳ ಜೊತೆಗೆ ಬರುವ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನ ಹಿತ ಕಾಪಾಡುವಂತಹ ಹೊಸ ದೃಷ್ಟಿ ಮತ್ತು ಹೊಸ ದಾರಿಯಲ್ಲಿ ಸರ್ಕಾರ ಸಾಗಲಿದೆ. ಸಮಾಜದ ಎಲ್ಲಾ ವರ್ಗ, ಅದರಲ್ಲೂ ಅವಕಾಶ ವಂಚಿತರು, ಹಿಂದುಳಿದವರು, ಮಹಿಳೆಯರು, ಯುವ ಜನಾಂಗ, ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ. ಹಳ್ಳಿ ಮತ್ತು ಪಟ್ಟಣಗಳ ಅಭಿವೃದ್ದಿಗೆ ಸರಿಸಮಾನವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ವಾಗ್ದಾನ ನೀಡಿದರು.

ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ಇಡೀ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಉತ್ಸುಕವಾಗಿದೆ. ಆತಂಕದ ದಿನಗಳು ಇನ್ನಿಲ್ಲ. ಧ್ವನಿ ಇಲ್ಲದ ರೈತರಿಗೆ ಧ್ವನಿಯಾಗಬೇಕು ಎಂಬುದು ಸರ್ಕಾರದ ಆಶಯ ಎಂದರು.

ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಸರ್ವ ರೀತಿಯ ಪ್ರಯತ್ನ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ, ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ಶಿಕ್ಷಣವನ್ನು ಕಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಆಹಾರ ಸುರಕ್ಷತಾ ಕಾಯ್ದೆ ಅನುಷ್ಠಾನ ಮೂಲಕ ಆಹಾರ ಸುರಕ್ಷತೆಯನ್ನು ಕಾಪಾಡಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಲಿದೆ ಎಂದು ರಾಜ್ಯಪಾಲರು ತಿಳಿಸಿದರು.

ಪ್ರಸ್ತುತ ರಾಜ್ಯ ಸರ್ಕಾರ ಹೆಚ್ಚುವರಿ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲು ನಿರ್ದಿಷ್ಟ ಯೋಜನೆಯನ್ನು ರೂಪಿಸಲಿದೆ. ಕಿರು ನೀರಾವರಿ ವ್ಯವಸ್ಥೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕೆರೆಗಳನ್ನು ತುಂಬಿಸುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಜಾನುವಾರುಗಳಿಗೆ ಆಹಾರ ಖಾತ್ರಿಪಡಿಸಲು ಮೇವು ಭದ್ರತಾ ನೀತಿ ರೂಪಿಸಿ ಜಾರಿಗೆ ತರಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳ, ಎಲ್ಲಾ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯಪಾಲರು ಹೇಳಿದರು.

ರಾಜ್ಯವನ್ನು 2020ರ ಒಳಗಾಗಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ, ಕಾರ್ಮಿಕ ಮುಕ್ತ ರಾಜ್ಯ ಎಂದು ಘೋಷಿಸುವುದಕ್ಕಾಗಿ ಪರಿಷ್ಕೃತ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ. ನಿರ್ದಿಷ್ಟ ವರ್ಗದ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ಭವಿಷ್ಯ ನಿಧಿ ಒದಗಿಸಲು ಯೋಜಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು. ಉತ್ತಮ ಗುಣಮಟ್ಟದ ಸಮಗ್ರ ಪ್ರಾಥಮಿಕ ಆರೋಗ್ಯ ಸೇವಾಕೇಂದ್ರಗಳ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಪ್ರಸ್ತುತ ಇರುವ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ರೈತರ ಬಾಳವನ್ನು ಹಸನು ಮಾಡುವ ಹಲವು ನಿರ್ಧಾರಗಳನ್ನು ಕೈಗೊಂಡು ಹಿಂದುಳಿದವರು, ಮಹಿಳೆಯರು, ಯುವ ಜನಾಂಗ ಹಾಗೂ ರೈತರ ಕಲ್ಯಾಣಕ್ಕೆ ಕಂಕಣಬದ್ಧವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಅವರು ರೈತ ಸಮುದಾಯಕ್ಕೆ ಮನವಿ ಮಾಡಿದರು.

ರಾಜ್ಯದಲ್ಲಿ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಬಯಕೆ. ನೀರು ಲಭ್ಯತೆಯನ್ನು ಆಧರಿಸಿ ಯಾವ ಋತುಮಾನಕ್ಕೆ ಯಾವ ಬೆಳೆ ಎಂಬುದನ್ನು ತಿಳಿದು ಕೃಷಿ ಮಾಡಬೇಕಿದೆ. ನಮ್ಮ ಕೃಷಿ ಪದ್ದತಿ ಹಾಗೂ ಕೃಷಿ ನೀತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.

ಹಾಲಿನ ಸಂಗ್ರಹಣೆಯಲ್ಲಿ ರಾಜ್ಯ ದೇಶದಲ್ಲಿ 2ನೇ ಸ್ಥಾನದಲ್ಲಿದ್ದು, ಮೊಟ್ಟೆ ಉತ್ಪಾದನೆಯಲ್ಲಿ 7ನೇ ಸ್ಥಾನ ಮತ್ತು ಮಾಂಸದ ಉತ್ಪಾದನೆಯಲ್ಲಿ 11ನೇ ಸ್ಥಾನವನ್ನು ಹೊಂದಿದೆ. ಸದ್ಯದಲ್ಲೇ ಸರ್ಕಾರವು ರಾಜ್ಯ ಮೇವು ಭದ್ರತಾ ನೀತಿಯನ್ನು ರೂಪಿಸಲಿದೆ ಮತ್ತು ಚರ್ಮ ಸಂಸ್ಕರಣೆ ಮತ್ತು ಹದ ಮಾಡುವ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ನೀರಾವರಿ ಸಾಮರ್ಥ್ಯ ವೃದ್ಧಿಸಲು ನಿರ್ಧಿಷ್ಟ ಯೋಜನೆ ರೂಪಿಸಲಾಗುವುದು. ಕಿರುನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಕೆರೆ ತುಂಬುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾಗಿ ರೈತರಿಗೆ ಪಾವತಿಸುವ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಗಿದೆ. ಈ ಸರ್ಕಾರ ನದಿಗಳ ಜಲಾಯನ ಅಚ್ಚುಕಟ್ಟು ಪ್ರದೇಶಗಳನ್ನು ಶುದ್ಧೀಕರಿಸಿ ನದಿಯ ದಂಡೆ ಮೇಲೆ ದಟ್ಟವಾದ ಮರಗಳ ತೋಪುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನೂ ಹೊಂದಿದೆ ಎಂದರು.

ಮೀನುಗಾರಿಕೆ ಅಭಿವೃದ್ಧಿಗಾಗಿ ಮಹಾತ್ಮಗಾಂಧಿ ನರೇಗಾ ಕಾರ್ಯಕ್ರಮದ ಸಂಯೋಜನೆಯೊಂದಿಗೆ ನೀಲಿ ಕ್ರಾಂತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿದೆ. ಸರ್ವಋತು ರಸ್ತೆಗಳನ್ನು ನಿರ್ಮಿಸುವುದರ ಮೂಲಕ ಗ್ರಾಮ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಗ್ರಾಮೀಣ ರಸ್ತೆ ನಿರ್ವಹಣಾ ನೀತಿಯನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಆರೋಗ್ಯ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡಿದ್ದು, ನಗರಗಳಲ್ಲಿ ಇರುವ ಆರೋಗ್ಯ ಸಂಸ್ಥೆಗಳ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ, ಪ್ರತಿ ಹಂತದ ಆರೋಗ್ಯ ಸೇವೆಗಳನ್ನು ಬಲಪಡಿಸುವ ಆಶಯವನ್ನು ಹೊಂದಿದೆ. ಪ್ರತಿ ವೈದ್ಯಕೀಯ ಕಾಲೇಜಿನಲ್ಲೂ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಬಲಪಡಿಸುವ ಆಶಯವನ್ನು ಸರ್ಕಾರ ಹೊಂದಿದೆ ಎಂದರು.

ಪರಿಶಿಷ್ಟ ಜಾತಿ ವರ್ಗದ ನಿರುದ್ಯೋಗಿ ಯುವಕರಿಗೆ ತರಬೇತಿ, ಅಲ್ಪಸಂಖ್ಯಾತರ ಅಭಿವೃದ್ಧಿಗೂ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಅವರು ಹೇಳಿ, ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಚಿಕಿತ್ಸಾ ಘಟಕಗಳನ್ನು ಆರಂಭಿಸಲಾಗಿದೆ. ತಾಯಿಯ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ತಗ್ಗಿಸುವ ಚಿಂತನೆ ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಅವರು ಹೇಳಿದರು.

ಬಂಡವಾಳ ಆಕರ್ಷಿಸಿ ಉದ್ಯೋಗ ಗುರಿಯೊಂದಿಗೆ ಹೊಸ ಕರ್ನಾಟಕ ಕೈಗಾರಿಕಾ ನೀತಿಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮಕ್ಕೂ ಸರ್ಕಾರ ಗಮನ ನೀಡಿದೆ. ವಿಶ್ವದ ಪ್ರವಾಸಿ ತಾಣಗಳ ಪೈಕಿ 50ನೇ ಸ್ಥಾನಕ್ಕೆ ರಾಜ್ಯವನ್ನು ತರುವು ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ಪ್ಲಾಸ್ಟಿಕ್ ಮತ್ತು ಕ್ಯಾರಿ ಬ್ಯಾಗ್‍ಗಳು ಇತರ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಸರಬರಾಜು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದ್ದು, ಅದನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿಯೂ ರಾಜ್ಯಪಾಲರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

vajubhai vala Governor ವಿಶ್ವ ಪ್ಲಾಸ್ಟಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ