ಬಜೆಟ್ ಅಧಿವೇಶನಕ್ಕೆ ಚಾಲನೆ

Budget session started at vidhana soudha

02-07-2018

ಬೆಂಗಳೂರು: ರಾಜ್ಯದ 15ನೇ ವಿಧಾನ ಸಭೆಯ ಮೊದಲ ಅಧಿವೇಶನ ಆರಂಭಗೊಂಡಿದೆ. ಜುಲೈ 12ರ ವರೆಗೆ ನಡೆಯುವ ಅಧಿವೇಶನಕ್ಕೆ ಸಾಂಪ್ರದಾಯಿಕವಾಗಿ ಸರ್ಕಾರದ ಮುನ್ನೋಟಗಳನ್ನು ಪ್ರಸ್ತಾಪಿಸುವ ಮೂಲಕ ರಾಜ್ಯಪಾಲ ವಜು ಭಾಯಿ ವಾಲಾ ಅವರು ಚಾಲನೆ ನೀಡಿದ್ದಾರೆ.

15ನೇ ವಿಧಾನಸಭೆ ಕಳೆದ ಮೇ ತಿಂಗಳಲ್ಲಿ ಎರಡು ಬಾರಿ ಸಭೆ ಸೇರಿತ್ತು. ಮೂರು ದಿನಗಳ ಬಿಜೆಪಿ ಸರ್ಕಾರ ಮೇ 19ರಂದು, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮೇ 25ರಂದು ವಿಧಾನಸಭೆಯಲ್ಲಿ ತಮ್ಮ ಸರ್ಕಾರಗಳಿಗಿರುವ ಬಹುಮತ ಸಾಬೀತು ಪಡಿಸುವ ಸಲುವಾಗಿ ಕಲಾಪ ನಡೆಸಿದ್ದವು. ಆದರೆ, ಎರಡೂ ಸಂದರ್ಭಗಳಲ್ಲಿ ಆಯಾ ದಿನಗಳಂದೇ ವಿಧಾನ ಸಭೆ ಮುಂದೂಡಲ್ಪಟ್ಟಿತ್ತು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ, ಅನುಮಾನಗಳ ನಡುವೆ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದೆ. ಅಧಿವೇಶನಕ್ಕೆ ಮುನ್ನವೇ ಕಾಂಗ್ರೆಸ್ ನ ಐದು ಮಂದಿ ಸಚಿವ ಸಂಪುಟ ಸೇರುವರು ಎನ್ನಲಾಗುತ್ತಿತ್ತಾದರೂ ಈಗ ಅದು ಅಧಿವೇಶನದ ನಂತರಕ್ಕೆ ಮುಂದೂಡಿಕೆಯಾಗಿದೆ. ಇದು ಸಚಿವಾಕಾಂಕ್ಷಿಗಳಲ್ಲಿ ಮತ್ತಷ್ಟು ಆಕ್ರೋಶ ಮತ್ತು ಹತಾಶೆಗೆ ಕಾರಣವಾಗಿದೆ.

ಹೊಸದಾಗಿ ಆಯವ್ಯಯ ಮಂಡನೆ ಬೇಕು-ಬೇಡ ಎಂಬ ವಾದಗಳ ನಡುವೆ ಸಮನ್ವಯ ಸಮಿತಿ ತೀರ್ಮಾನದಂತೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಸ್ತಾಪವಾಗುತ್ತಿರುವ ಸಾಲಮನ್ನಾ ವಿಚಾರದಲ್ಲಿ ರಾಜ್ಯದ ರೈತರು ಬಜೆಟ್ ಕಡೆಗೆ ಗಮನ ಇರಿಸಿದ್ದಾರೆ. ರೈತರ ಸಾಲಮನ್ನಾ ಜೊತೆಗೆ, ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಗರ್ಭಿಣಿಯರು ಮತ್ತು ಹಿರಿಯ ನಾಗರಿಕರಿಗೆ ಮಾಸಾಶನದ ಭರವಸೆಯನ್ನು ಈಡೇರಿಸಬೇಕಾದ ಒತ್ತಡದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಇದ್ದಾರೆ.

ತನ್ನ ಹಳೆಯ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಮುಂದುವರಿಸುವಂತೆ ಕಾಂಗ್ರೆಸ್ ಬಿಗಿ ಪಟ್ಟು ಹಾಕಿರುವುದರಿಂದ ಇವುಗಳ ಜೊತೆಗೆ ರಾಜ್ಯದ ಹಳೆಯ ಹಾಗೂ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕುಮಾರಸ್ವಾಮಿ ಹುಡುಕಲಿರುವ ಮಾರ್ಗಗಳು ಕುತೂಹಲ ಮೂಡಿಸಿವೆ.

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ 81 ಸದಸ್ಯರನ್ನು, ಜೆಡಿಎಸ್ 37 ಸದಸ್ಯ ಬಲವನ್ನು ಅಂದರೆ, ಸಮ್ಮಿಶ್ರ ಸರ್ಕಾರವು ಒಟ್ಟಾರೆ 118 ಸಂಖ್ಯಾ ಬಲವನ್ನು ಹೊಂದಿದೆ. ಆದರೆ, 104 ಸದಸ್ಯರನ್ನು ಹೊಂದಿರುವ ಬಿಜೆಪಿ ಪ್ರತಿ ಪಕ್ಷವಾಗಿದೆ. ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲಾಗದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾದ ಸಂಕಟದಲ್ಲಿ ಇರುವ ಬಿಜೆಪಿ, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ಸಜ್ಜಾಗಿದೆ. ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನವರಂತೂ ಕೊತ ಕೊತ ಕುದಿಯುತ್ತಿದ್ದಾರೆ. ಸಾಲಮನ್ನಾ ಸ್ವರೂಪದ ಮೇಲೆ ಬಿಜೆಪಿ ಹೋರಾಟ ರೂಪುಗೊಳ್ಳಲಿದೆ.

ಪ್ರಬಲ ಪ್ರತಿ ಪಕ್ಷದ ದೋಸ್ತಿ ಪಕ್ಷ ಕಾಂಗ್ರೆಸ್ ನ ಸದಸ್ಯರನ್ನು ಸಂಭಾಳಿಸಿಕೊಂಡು ಸುಗಮವಾಗಿ ಸದನವನ್ನು ನಿರ್ವಹಿಸುವುದು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲಾಗಲಿದೆ.

ಹಣಕಾಸು ವಿಧೇಯಕ ಸೇರಿ ಪ್ರಮುಖ ವಿಧೇಯಕಗಳ ಮಂಡನೆ, ಚರ್ಚೆ ಮತ್ತು ಅಂಗೀಕಾರ ಸಂದರ್ಭಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಸದಸ್ಯರು ಸದನದಲ್ಲಿ ಇರುವಂತೆ ನೋಡಿಕೊಳ್ಳ ಬೇಕು. ಇಲ್ಲವಾದರೆ ಮುಜುಗರ ಖಚಿತ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗುತ್ತಿಗೆದಾರರಿಂದ ಬಿಲ್ ಪಾವತಿಗೆ ಕಮಿಷನ್ ಬೇಡಿಕೆ ಇಟ್ಟಿದ್ದಾರೆಂದು ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು ಮಾಡಿರುವ ಆರೋಪ, ರಾಜ್ಯಾದ್ಯಂತ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಅನೇಕ ಕಡೆ ಆಗಿರುವ ಅನಾಹುತಗಳೂ ಈ ಬಾರಿ ಸದನದಲ್ಲಿ ಸದ್ದು ಮಾಡಲಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ