'ಮೈತ್ರಿ ಸರ್ಕಾರ ಸುಭದ್ರ:ಆತಂಕ ಕರಗಿಸಿದ ಸಿದ್ದರಾಮಯ್ಯ'

coalition government and Siddaramaiah

30-06-2018

ಬೆಂಗಳೂರು: ಜೆಡಿಎಸ್-ಕಾಂಗ್ರೇಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸುತ್ತ ಕಳೆದ ವಾರದಿಂದ ಗಿರಕಿ ಹೊಡೆಯುತ್ತಿದ್ದ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಹಲವರಲ್ಲಿ ಮೂಡಿದ್ದ ಅನುಮಾನ-ಆತಂಕ-ಅಪನಂಬಿಕೆ-ದುಗುಡಗಳೆಲ್ಲವೂ ಮಂಜಿನ ಹನಿಯಂತೆ ಕರಗಿಹೋಗಿವೆ.

'ಯಾರೋ ಮಾಡಿದ ವಿಡಿಯೋಗೂ ನನಗೂ ಸಂಬಂಧವಿಲ್ಲ. ನಾನು ಏನು ಹೇಳಿದ್ದೇನೆ‌. ಯಾವ ಸಂದರ್ಭಕ್ಕನುಗುಣವಾಗಿ ಹೇಳಿದ್ದೇನೆ ಎಂಬುದು ಯಾರಿಗೂ ಗೊತ್ತಿಲ್ಲ. ನಾನು ಮಾತನಾಡಿದ್ದ ಪೈಕಿ ಆಯ್ದ ಭಾಗಗಳನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಅದರ ಹಿಂದೆ-ಮುಂದೆ ಹೇಳಿರುವ ಮಾತುಗಳು ವಿಡಿಯೋದಲ್ಲಿ ಇಲ್ಲ. ಇಂತಹ ನಡವಳಿಕೆಗಳು ನೈತಿಕವಾದುದ್ದಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಜತೆ ಮೈತ್ರಿ ಸರ್ಕಾರ ರಚಿಸಿದ್ದೇವೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದೆ ಎಂದು ನಿಮಗೆ ಹೇಳಿದವರು ಯಾರು'? ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಅಬಾಧಿತ ಎಂದು ಸ್ಪಷ್ಟ ಸಂದೇಶ ಸಾರಿದ್ದಾರೆ.

ಕರ್ನಾಟಕದ ರಾಜಕಾರಣವನ್ನು ಗಮನಿಸಿ. ಹಿಂದುಳಿದ ಜಾತಿಯಿಂದ ಬಂದ ರಾಜಕಾರಣಿಗಳು ಕೊಟ್ಟ ಕೊಡುಗೆಗಳು, ಮಾಡಿದ ಸಾಧನೆಗಳನ್ನು ಪ್ರಾಜ್ವಲ ಮನಸ್ಸಿನಿಂದ ಒಪ್ಪಿ ಅವರ ಬೆನ್ನಿಗೆ ನಿಂತು ಅವರೊಂದಿಗೆ ಹೆಜ್ಜೆ ಹಾಕಿದ್ದು ಅಪರೂಪ. ಅದರ ಬದಲಿಗೆ ಅವರನ್ನು ಖಳನಾಯಕರನ್ನಾಗಿಸುವ ಅನೇಕ ಹುನ್ನಾರಗಳು ಕಣ್ಣಿಗೆ ರಾಚುತ್ತವೆ.

ಆಯವ್ಯಯ, ರೈತರ ಸಾಲಮನ್ನಾ, ಕಾಂಗ್ರೆಸ್ ನಲ್ಲಿನ ಆಂತರಿಕ ಕಚ್ಚಾಟ-ಭಿನ್ನಮತ ಕುರಿತು ಸಿದ್ದರಾಮಯ್ಯ ಲೋಕಾಭಿರಾಮವಾಗಿ ಆಡಿದ ಮಾತುಗಳನ್ನೇ ಉದ್ದೇಶ ಪೂರ್ವಕವಾಗಿ ದೊಡ್ಡದಾಗಿ ಬಿಂಬಿಸಲಾಯಿತು. ಸಿದ್ದರಾಮಯ್ಯ ಹೊಟ್ಟೆ ಕಿಚ್ಚಿನ ಮನುಷ್ಯ, ಒಂದು ಜಾತಿಯ ಪರಮ ವಿರೋಧಿ, ಹತಾಶೆ ಗೊಳಗಾಗಿರುವ ಖಳನಾಯಕ ಎಂದು ಸಾರಿ ಮೈತ್ರಿ ಸರ್ಕಾರದಲ್ಲಿ ಒಡಕು ಮೂಡಿಸುವ ಸಂಚು ನಡೆಸಲಾಯಿತು. ಈ ಕಾರ್ಯಾಚರಣೆಗೆ ಕೆಲ ಮಾಧ್ಯಮಗಳು ಮುಂಚೂಣಿಯಲ್ಲಿ ನಿಂತು ದಾರದೀಪ ತೋರಿಸಿದವು.

ಸಿದ್ದರಾಮಯ್ಯ ಅವರ ಖಾಸಗಿ ಮಾತುಕತೆಗೆ ಸಮಚಿತ್ತದಿಂದ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಪ್ರತಿಕ್ರಿಯಿಸಿದರೆ, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ತೀವ್ರ ಆತಂಕಕ್ಕೊಳಗಾದವರಂತೆ ಆತುರಾತುರವಾಗಿ ಬೆಂಕಿ ಉಂಡೆಗಳನ್ನು ಉಗುಳಿದರು. ಮರು ದಿನದ ವೇಳೆಗೆ ವಾಸ್ತವ ಅರಿವಾದವರಂತೆ ಮಾತನಾಡಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಅನುವುಮಾಡಿಕೊಟ್ಟರು.

ಸಿದ್ದರಾಮಯ್ಯ ಅವರ ರಾಜಕೀಯ ದಿನಗಳನ್ನು ನೆನಪಿಸಿಕೊಳ್ಳಿ. ಎಂದೂ ಅಪಕ್ವ ರಾಜಕಾರಣಿಯಂತೆ, ಅವಾಸ್ತವ ರಾಜಕಾರಣಿಯಂತೆ ನಡೆದುಕೊಂಡಿದ್ದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಕಾಲಾವಧಿ ಕೇವಲ ಮೂರು ತಿಂಗಳು, ಹೆಚ್ಚೆಂದರೆ ಎರಡು ವರ್ಷ ಎನ್ನುವ ಅಪಸ್ವರಗಳ ನಡುವೆ ಐದು ವರ್ಷಗಳ ಪೂರ್ಣಾವಧಿ ಪೂರೈಸಿ ತಾವೆಂತಹ ಅಭಿವೃದ್ಧಿ ಪರ  ಆಡಳಿತಗಾರ ಎನ್ನುವುದನ್ನು ನಿರ್ವಿವಾದವಾಗಿ ಸಾಬೀತು ಪಡಿಸಿದ ನಾಯಕ.

ಬಿಜೆಪಿಯ ವೇಗವನ್ನು ನಿಯಂತ್ರಿಸಲು ಇಲ್ಲವೆ; ಕುಮಾರಸ್ವಾಮಿ  ಬಿಜೆಪಿ ಜತೆ ಕೈಜೋಡಿಸುವುದನ್ನು ತಡೆಯಲು ಲೋಕಸಭಾ ಚುನಾವಣೆ ವರೆಗಾದರೂ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ನಂತರ, ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿ  ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮುಂದುವರಿಯುವುದು ಅಪಾಯಕಾರಿ ಎನ್ನುವ ನಿಲುವು ಸಿದ್ದರಾಮಯ್ಯ ಅವರಿಗಿರುವಂತಿದೆ. ಇದೇ ಅಭಿಪ್ರಾಯ ಕಾಂಗ್ರೆಸ್ ನ ಬಹುತೇಕ ನಾಯಕರು ಮತ್ತು ಕಾರ್ಯಕರ್ತರದ್ದು ಎನ್ನಲಾಗುತ್ತಿದೆ.

ತಾವು ಹಿಂದುಳಿದ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕಾಗಿಯೇ ತಮ್ಮ ಸಾಧನೆ ಮತ್ತು ಕೊಡುಗೆಗಳನ್ನು ಒಪ್ಪುವ ಮನಸ್ಥಿತಿ ಅನೇಕರಲ್ಲಿ ಇಲ್ಲ. ವಿವಾದಗಳ ಸೃಷ್ಟಿಯ ಅವಕಾಶಗಳನ್ನು ಕಾಯುತ್ತಲೇ ಇರುತ್ತಾರೆ. ಇಲ್ಲವೆ, ಇಲ್ಲದ ವಿವಾದಗಳನ್ನು ಹುಟ್ಟುಹಾಕಿ ಹಣಿಯುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ ಎನ್ನುವ ನೋವು ಸಿದ್ದರಾಮಯ್ಯ ಅವರಲ್ಲಿದೆ. ಈ ರೀತಿಯ ಅರ್ಥದ ಮಾತನ್ನು ಅವರು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಬಹಿರಂಗವಾಗಿ ಹೇಳಿದ್ದಿದೆ.

ಸಿದ್ದರಾಮಯ್ಯ ಅವರ ಶಾಂತಿವನದ ಲೋಕಾಭಿರಾಮದ ಮಾತುಗಳು ಉಂಟು ಮಾಡಿದ ಅಲ್ಲೋಲಕಲ್ಲೋಲದ ವಿಷಯಕ್ಕೆ ಮತ್ತೆ ಬರುವುದಾದರೆ ಅವರ ಸಾಂದರ್ಭಿಕ ವೈಯಕ್ತಿಕ ಅನಿಸಿಕೆಗಳೇ ಬೇರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅವರ ಜವಾಬ್ದಾರಿಯೇ ಬೇರೆ. ಇದನ್ನು ವಿವಾದ ಸೃಷ್ಟಿಕರ್ತರು ಒಂದು ಕ್ಷಣ ಚಿಂತಿಸಿದ್ದರೆ ವಾರ ಕಾಲ ರಾಜ್ಯ ರಾಜಕಾರಣದಲ್ಲಿ ಅನುಮಾನದ ಧೂಳು ಏಳುತ್ತಿರಲಿಲ್ಲ. ಕೃತಕ ಭಯದ ಮೋಡಗಳು ದಟ್ಟೈಸುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದ  ಭವಿಷ್ಯದ ಬಗ್ಗೆ ಅಪನಂಬಿಕೆ-ದುಗುಡಗಳು ಮೂಡುತ್ತಿರಲಿಲ್ಲ.

ಈಗ ಅಂತಿಮವಾಗಿ ಉಳಿದಿರುವ ಪ್ರಶ್ನೆ ಎಂದರೆ, ಸಿದ್ದರಾಮಯ್ಯ ಹಾಗೂ ಹೆಚ್.ಡಿ.ದೇವೇಗೌಡರ ಕುಟುಂಬದ ನಡುವಿನ ಮಧುರವಲ್ಲದ ಸಂಬಂಧವನ್ನೇ ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು 'ಖಳನಾಯಕರ'ನ್ನಾಗಿಸುವ ಪ್ರಯತ್ನಗಳು ನಡೆದವೇ ಎನ್ನುವುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ