ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ: ಸಿದ್ದರಾಮಯ್ಯ

Siddaramaiah talked with media after kpss meeting?

29-06-2018

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಿಯೋಗೂ ನನಗೂ ಸಂಬಂಧವಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಯಾವುದೇ ಅನುಮಾನ ಬೇಡ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೂ ತೆರೆ ಎಳೆದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಯಾವುದೋ ಒಂದು ವಿಡಿಯೋ ಬಿಡುಗಡೆಯಾಗಿದೆ. ನಾನು ಏನು ಹೇಳಿದ್ದೇನೆ. ಯಾವ ಸಂದರ್ಭಕ್ಕನುಗುಣವಾಗಿ ಹೇಳಿದ್ದೇನೆ ಎಂಬುದು ಯಾರಿಗೂ ಗೊತ್ತಿಲ್ಲ. ನಾನು ಮಾತನಾಡಿದ ಪೈಕಿ ಆಯ್ದ ಭಾಗಗಳನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಅದರ ಹಿಂದೆ-ಮುಂದೆ ಹೇಳಿರುವ ಮಾತುಗಳು ವಿಡಿಯೋದಲ್ಲಿ ಇಲ್ಲ. ಇಂತಹ ನಡವಳಿಕೆಗಳು ನೈತಿಕವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರೋ ಮಾಡಿದ ವಿಡಿಯೋಗೂ ನನಗೂ ಸಂಬಂಧವಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ.

ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ. ಯಾವುದೇ ಅನುಮಾನ ಬೇಡ. ಈ ಸರ್ಕಾರದ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದೆ ಎಂದು ನಿಮಗೆ ಹೇಳಿದವರು ಯಾರು ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಸಮಿತಿಯ ಮುಖ್ಯಸ್ಥರಾದ ಎಂ.ವೀರಪ್ಪಮೊಯ್ಲಿ, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ನಾನು ಇಂದು ಚರ್ಚೆ ಮಾಡಿದ್ದೇವೆ. ಮಧ್ಯಾಹ್ನ ಜೆಡಿಎಸ್‍ನ ಸದಸ್ಯರೊಂದಿಗೆ ವೀರಪ್ಪಮೊಯ್ಲಿ ಅವರ ಸಮಿತಿ ಸಭೆ ನಡೆಸಲಿದೆ. ಭಾನುವಾರ ಸಮನ್ವಯ ಸಮಿತಿ ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

siddaramaiah KPCC ಮಾಧ್ಯಮ ಅಸಮಾಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ