ರಕ್ತ ಪೋಲು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ೩ನೇ ಸ್ಥಾನ !

Kannada News

26-05-2017

ಬೆಂಗಳೂರು:- ದೇಶದಲ್ಲಿ ರಕ್ತ ಪೋಲು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ೩ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸಂಗ್ರಹವಾಗುವ ಒಟ್ಟು ರಕ್ತದಲ್ಲಿ ಶೇ.೧೦ ಪೋಲಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ವರ್ಷ (೨೦೧೬ ಏಪ್ರಿಲ್‌ನಿಂದ ೨೦೧೭ ಮಾರ್ಚ್) ರಾಜ್ಯದಲ್ಲಿ ೭.೨ ಲಕ್ಷ ಯೂನಿಟ್ ರಕ್ತ ಸಂಗ್ರಹವಾಗಿದೆ. ಈ ಅವಧಿಗೆ ಸರ್ಕಾರ ೬.೨೫ ಲಕ್ಷ ಯೂನಿಟ್ ಸಂಗ್ರಹ ಗುರಿ ಇಟ್ಟುಕೊಂಡಿತ್ತು. ಆದರೆ, ನಿರೀಕ್ಷೆಗೂ ಮೀರಿ ಅಂದರೆ ಶೇ.೧೦೯ ಸಾಧನೆಯಾಗಿದೆ. ಆದರೆ, ರಕ್ತ ಪೋಲು ಮಾಡುವುದರಲ್ಲಿ ೩ನೇ ಸ್ಥಾನಗಳಿಸಿರುವುದನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಬಹಿರಂಗಪಡಿಸಿದೆ. ಈ ಮಾಹಿತಿಯಿಂದ  ಎಚ್ಚೆತ್ತುಕೊಂಡಿರುವ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ (ಕಸಪ್ಸ್) ಅಮೂಲ್ಯವಾದ ರಕ್ತ ವ್ಯರ್ಥವಾಗದಂತೆ ತಡೆಯಲು ಮುಂದಾಗಿದೆ. ಇದಕ್ಕಾಗಿ ಅದು ಮೊದಲಿಗೆ ಖಾಸಗಿ ರಕ್ತನಿಧಿ ಕೇಂದ್ರಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ೪೦ ಸರ್ಕಾರಿ ರಕ್ತನಿಧಿ ಕೇಂದ್ರಗಳು ಸೇರಿ ೨೦೦ ರಕ್ತನಿಧಿ ಕೇಂದ್ರಗಳಿವೆ. ಇಷ್ಟು ದೊಡ್ಡ ರಕ್ತನಿಧಿ ಜಾಲ ಹಾಗೂ ಸ್ವಯಂಪ್ರೇರಿತ ದಾನಿಗಳಿದ್ದರೂ ರಾಜ್ಯದಲ್ಲಿ ನಿತ್ಯವೂ ಅನೇಕರು ರಕ್ತಕ್ಕಾಗಿ ಪರದಾಡುವುದು ಸಾಮಾನ್ಯವಾಗಿದೆ.`ಜೀವ ಸಂಜೀವಿನಿ' ಹೆಸರಿನಲ್ಲಿ ಯಾವ ರಕ್ತನಿಧಿ ಕೇಂದ್ರದಲ್ಲಿ ಯಾವ ಮಾದರಿಯ ರಕ್ತ ಸಂಗ್ರಹವಿದೆ ಎಂಬುದನ್ನು ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆಯನ್ನೂ ಸರ್ಕಾರ ರೂಪಿಸಿದೆ. ಆದರೆ, ಸಮರ್ಪಕವಾಗಿ ಅಪ್‌ಡೇಟ್ ಮಾಡುತ್ತಿಲ್ಲ. ಹಾಗಾಗಿ ಮಾಹಿತಿ ಅಪ್‌ಡೇಟ್ ಮಾಡದಿದ್ದರೆ ರಕ್ತನಿಧಿಗಳ ಪರವಾನಗಿ ರದ್ದುಪಡಿಸುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ೫೦ ಮಿ.ಲೀ.ಗೂ ಕಡಿಮೆ ಪ್ರಮಾಣದಲ್ಲಿ ಸಂಗ್ರಹ, ಅವಧಿ ಮೀರಿದರೆ, ರಕ್ತ ಹೆಪ್ಪುಗಟ್ಟಿದರೆ, ರಕ್ತ ತುಂಬುವ ಚೀಲಗಳು ಗುಣಮಟ್ಟದ್ದಾಗಿರದಿದ್ದರೆ ರಕ್ತವನ್ನು ನಾಶಪಡಿಸುವುದು ಅನಿವಾರ್ಯ ಎನ್ನುತ್ತಾರೆ ವೈದ್ಯರು. ವಿಂಗಡಿಸಿದ ರಕ್ತ ಯಾವಾಗ ಕೊಡಬೇಕು, ಪೂರ್ಣ ರಕ್ತವನ್ನು ಯಾವಾಗ ಕೊಡಬೇಕು ಎಂಬ ಬಗ್ಗೆ ಅನೇಕ ವೈದ್ಯರಿಗೆ ಮಾಹಿತಿಯಿಲ್ಲದ ಕಾರಣ ಮತ್ತು ಇತರ ಕಾರಣಗಳಿಂದ ರಕ್ತ  ಪೋಲಾಗುತ್ತಿದೆ ಎನ್ನಲಾಗಿದೆ. ಪೂರ್ಣ ರಕ್ತ ಮತ್ತು ಕೆಂಪುರಕ್ತ ಕಣಗಳು, ೩೧ದಿನ, ಪ್ಲೇಟ್‌ಲೆಟ್ಸ್-೫ ದಿನ, ಕ್ರಯೋ ಪ್ರಿಸಿಪಿಟೇಟ್ ಮತ್ತು ಪ್ಲಾಸ್ಮಾ: ೧ ವರ್ಷ ಬಳಸಬಹುದಾಗಿದೆ. ರಕ್ತ ಪೋಲಾಗದಂತೆ ತಡೆಗಟ್ಟಲು ಹಲವು ಕ್ರಮ ಕೈಗೊಳ್ಳುವ ಸಂಬಂಧ ಉನ್ನತಾಧಿಕಾರಿಗಳ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಸಂಬಂಧ ನಿಯಮಗಳನ್ನು ರೂಪಿಸಿ ರಕ್ತ ಪೋಲಾಗದಂತೆ ಎಚ್ಚರ ವಹಿಸಲಾಗುವುದು ಎಂದು ಕಸಪ್ಸ್ ಸಹಾಯಕ ಯೋಜನಾ ನಿರ್ದೇಶಕ ಡಾ. ಕೆ. ಶ್ರೀನಿವಾಸಗೌಡ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ