ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಮೊದಲ ಮಾತು

Karnataka film academy chairman

29-06-2018

ಬೆಂಗಳೂರು: ಬೆಂಗಳೂರಿಗೆ ಮಾತ್ರ ಮೀಸಲಾಗಿರುವ ಚಲನಚಿತ್ರೋತ್ಸವಗಳು ಹಾಗೂ ಸಿನಿಮಾಸಕ್ತರ ಕ್ಲಬ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವುದು ಮತ್ತು ಸಿನಿಮಾಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೊರತರುವುದು ತಮ್ಮ ಗುರಿಯಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಚಿತ್ರೋತ್ಸವಗಳನ್ನು ಹಾಗೂ ಸಿನಿಮಾಸಕ್ತರ ಕ್ಲಬ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಕ್ಲಬ್‍ಗಳನ್ನು ಸಂಪರ್ಕಿಸಿ ಅವರ ಸಹಕಾರದೊಂದಿಗೆ ಅಲ್ಲಿ ಸಹ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಾರಂಭಿಸುವುದರ ಮುಖಾಂತರ ಅಲ್ಲಿನ ಚಿತ್ರ ರಸಿಕರಿಗೂ ಸಹ ಅವಕಾಶ ಕಲ್ಪಿಸಲು ಯೋಜಿಸಲಾಗುತ್ತಿದೆ ಎಂದರು.

ಕನ್ನಡ ಚಲನಚಿತ್ರದ ಇತಿಹಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪುಸ್ತಕಗಳು ಪ್ರಕಟವಾಗಿದ್ದು,  ಇತ್ತೀಚಿನ ಚಲನಚಿತ್ರ ರಂಗದ ಬೆಳವಣಿಗೆ ಹಾಗೂ ಪ್ರಸ್ತುತ ಚಲನಚಿತ್ರ ರಂಗದ ಸ್ಥಿತಿಗತಿ ಕುರಿತು ಪುಸ್ತಕಗಳನ್ನು ಹೊರತರಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಕನ್ನಡದಲ್ಲಿ ಸಿನಿಮಾದ ವಿವಿಧ ವಿಭಾಗಗಳನ್ನು ಕುರಿತ ಉತ್ತಮ ಪುಸ್ತಕಗಳ ಕೊರತೆ ಸಾಕಷ್ಟು ಇದೆ. ಬರೆಯುವವರು ಹಾಗೂ ಅನುವಾದಿಸುವವರು ಬಹಳ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.  ಕೆಲವು ಉತ್ತಮ ಕೃತಿಗಳ ಅನುವಾದ ಅಗತ್ಯವಾದರೂ, ಕನ್ನಡದಲ್ಲಿ ಸ್ವತಂತ್ರ ಕೃತಿ ರಚನೆಗಳು ಬೇಕಾಗಿವೆ.  ಪ್ರಬಲ ಮಾಧ್ಯಮವಾದ ಚಲನಚಿತ್ರ ಕುರಿತ ಬರಹಗಳು ಬೇರೆ ಬೇರೆ ಹಂತಗಳಲ್ಲಿ ಪಠ್ಯ ಪುಸ್ತಕಗಳಾಗಬೇಕಾಗಿದೆ.  ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಂತಗಳಲ್ಲಿ ಚಲನಚಿತ್ರದ ಮಹತ್ವದ ಸಮಾಜಮುಖಿಯಾದ ತಾಂತ್ರಿಕ ವಿಚಾರಗಳು ಪ್ರಾತಿನಿಧಿಕವಾಗಿ ಪಠ್ಯಗಳಾಗಬೇಕು.  ಈ ಕುರಿತು ಶಿಕ್ಷಣ ಇಲಾಖೆ ಹಾಗೂ ವಿಶ್ವ ವಿದ್ಯಾನಿಲಯಗಳೊಂದಿಗೆ ಚರ್ಚಿಸಲಾಗುವುದು ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಚಲನಚಿತ್ರ ಅಕಾಡೆಮಿಗೆ ಸರ್ಕಾರ, ನಂದಿನಿ ಬಡಾವಣೆಯಲ್ಲಿ ವಿಶಾಲವಾದ ಕಟ್ಟಡವೊಂದನ್ನು ನೀಡಿದೆ. ಸ್ವಂತ ಕಟ್ಟಡವಿರುವುದರಿಂದ ಇಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಲು ಅವಕಾಶವಿದೆ.  ಇದೇ ಕಟ್ಟಡದಲ್ಲಿರುವ 500 ಆಸನಗಳಿರುವ ಚಿತ್ರಮಂದಿರ ಅಪೂರ್ಣವಾಗಿದೆ. ಈ ಚಿತ್ರಮಂದಿರವನ್ನು ಸಜ್ಜುಗೊಳಿಸಲು ಆದ್ಯತೆ ನೀಡಲಾಗುವುದು ಎಂದರು.

ಕಟ್ಟಡದಲ್ಲಿರುವ ವಿಶಾಲವಾದ ಆವರಣದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು.  ಈ ಭಂಡಾರದಲ್ಲಿ ಲೈಬ್ರರಿ, ಚಲನಚಿತ್ರ ಸಿ.ಡಿ.ಗಳ ಸಂಗ್ರಹ, ಚಲನಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಆಕರಗಳನ್ನು ಒಳಗೊಂಡಿರುತ್ತದೆ ಹಾಗೂ ಸುಮಾರು 20 ಮಂದಿ ಕುಳಿತು ಸಿನಿಮಾ ವೀಕ್ಷಿಸಬಹುದಾದ ಸೌಲಭ್ಯವನ್ನು ಒಳಗೊಂಡಿರುವಂತೆ ರೂಪಿಸುವ ಉದ್ದೇಶವಿದೆ.  ಇದು ಸಿನಿಮಾ ಕುರಿತು ಸಂಶೋಧನೆ ಮಾಡುವವರಿಗೆ ಅನುಕೂಲವಾಗಲಿದೆ.  ಈ ರೀತಿಯ ಚಲನಚಿತ್ರ ಭಂಡಾರ ಸ್ಥಾಪನೆಗೆ ಈಗಾಗಲೇ ಸರ್ಕಾರದ ಆದೇಶವಾಗಿದ್ದು,  ಅದನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಮಾತನಾಡಿ ಕನ್ನಡ ಚಲನಚಿತ್ರರಂಗಕ್ಕೆ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರ ಕೊಡುಗೆ ಅಪಾರ, ಅವರೊಬ್ಬ ಬಹುಮುಖ ಪ್ರತಿಭೆಯಾಗಿದ್ದು ಚಲನಚಿತ್ರದ ಹಲವು ವಿಭಾಗಗಳಲ್ಲಿ ಅನುಭವವುಳ್ಳವರು, ಅವರಂತಹ ಸಾಧಕರು ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರಾಗಿದ್ದು ಚಲನಚಿತ್ರರಂಗದ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ