ಹಿಂದಿಗೆ ಅಗ್ರ ಸ್ಥಾನ-ಕನ್ನಡಕ್ಕೆ ಎಂಟನೇ ಸ್ಥಾನ

which language has highest mother tongue people in india?

28-06-2018

ಬೆಂಗಳೂರು: ಅತಿ ಹೆಚ್ಚು ಮಾತೃ ಭಾಷಿಕರನ್ನು ಹೊಂದಿದ ಭಾಷೆಗಳ ಪಟ್ಟಿಯಲ್ಲಿ ಹಿಂದಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು ಕನ್ನಡಕ್ಕೆ 8ನೇ ಸ್ಥಾನ ಲಭಿಸಿದೆ. ವಿಶೇಷವೆಂದರೆ ಕನ್ನಡ ಮಾತೃಭಾಷಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಅಂಕಿ ಅಂಶ ಬಹಿರಂಗಗೊಂಡಿದೆ.

2011ರ ಜನಗಣತಿಯನ್ನು ಆಧರಿಸಿ ಮಾತೃಭಾಷಿಕರ ಅಂಕಿ-ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದು, ಮೊದಲ ಸ್ಥಾನ ಪಡೆದ ಮಾತೃಭಾಷೆ ಎಂಬ ಖ್ಯಾತಿಗೆ ಹಿಂದಿ ಪಾತ್ರವಾಗಿದ್ದು, ಬಂಗಾಳಿ ಹಾಗೂ ಮರಾಠಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿವೆ. ಕನ್ನಡ ಕಣ್ಮರೆಯಾಗುತ್ತಿದೆ ಎನ್ನುವ ಕೂಗಿನ ನಡುವೆಯೂ ಕನ್ನಡಕ್ಕೆ 8ನೇ ಸ್ಥಾನ ಸಿಕ್ಕಿದೆ. ವಿಶೇಷವೆಂದರೆ ಕನ್ನಡವನ್ನು ಮಾತೃಭಾಷೆ ಎಂದು 2011ರ ಜನಗಣತಿಯಲ್ಲಿ ನಮೂದಿಸಿದವರ ಪ್ರಮಾಣ ದೇಶದ ಒಟ್ಟಾರೆ ವಿವಿಧ ಭಾಷಿಕರ ಶೇಕಡಾವಾರು ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಶೇ.3.69ರಿಂದ (2001ರ ಗಣತಿ ಪ್ರಕಾರ) ಶೇ.3.73ಕ್ಕೇರಿದೆ.

ಕನ್ನಡವನ್ನು ಪ್ರಥಮ ಭಾಷೆ ಎಂದು 2011ರಲ್ಲಿ 4.37 ಕೋಟಿ ಜನರು ಜನಗಣತಿ ವೇಳೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಪ್ರಮಾಣ 2001ರಲ್ಲಿ 3.79 ಕೋಟಿ ಇತ್ತು. ಹೀಗಾಗಿ ಕನ್ನಡ ಮಾತೃಭಾಷಿಕರ ಸಂಖ್ಯೆ ಸುಮಾರು 58 ಲಕ್ಷದಷ್ಟು ಹೆಚ್ಚಳವಾಗಿದೆ. ಹಾಗಂತ ಉಳಿದ ಸುಮಾರು 2 ಕೋಟಿ ಕರ್ನಾಟಕದ ಜನರಿಗೆ ಕನ್ನಡ ಗೊತ್ತೇ ಇಲ್ಲ ಎಂದರ್ಥವಲ್ಲ. ಅವರು ಕನ್ನಡವನ್ನು ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಕನ್ನಡವನ್ನು ಮಾತೃಭಾಷೆ ಎಂದು ಪರಿಗಣಿಸಿಲ್ಲ. 2001ರಲ್ಲಿ ಕರ್ನಾಟಕದ ಜನಸಂಖ್ಯೆ 5.28 ಕೋಟಿ ಇದ್ದರೆ 2011ರಲ್ಲಿ 6.10 ಕೋಟಿ ಇತ್ತು.

ದೇಶದ 22 ಅನುಸೂಚಿತ ಅಧಿಕೃತ ಭಾಷೆಗಳಲ್ಲಿ ಹಿಂದಿ ಮೊದಲ ಸ್ಥಾನ ಗಳಿಸಿದೆ. ದೇಶದಲ್ಲಿ 2001ರಲ್ಲಿ ಶೇ.41.03 ಜನರು ಹಿಂದಿ ಮಾತನಾಡುತ್ತಿದ್ದರು. ಅವರ ಪ್ರಮಾಣ ಈಗ ಶೇ.43.63ಕ್ಕೇರಿದೆ. ಇನ್ನು ಬಂಗಾಳಿ 2ನೇ ಸ್ಥಾನ ಪಡೆದಿದೆಯಾದರೂ ಅದರ ಪ್ರಮಾಣ ಶೇ.8.11ರಿಂದ ಶೇ.8.3ಕ್ಕೆ ಕುಸಿದಿದೆ. ತೆಲುಗುವನ್ನು 4ನೇ ಸ್ಥಾನಕ್ಕೆ ತಳ್ಳಿ ಮರಾಠಿ ಈ ಸಲ 3ನೇ ಸ್ಥಾನ ಸಂಪಾದಿಸಿದೆ. ಮರಾಠಿ ಭಾಷಿಕರ ಸಂಖ್ಯೆ 2001ರಲ್ಲಿ ಶೇ.6.99 ಇತ್ತು. ಅದರ ಪ್ರಮಾಣ 2001ರಲ್ಲಿ ಶೇ.7.09ಕ್ಕೇರಿದೆ. ತೆಲುಗು ಭಾಷಿಕರ ಸಂಖ್ಯೆ 10 ವರ್ಷದಲ್ಲಿ ಶೇ.7.19ರಿಂದ ಶೇ.6.93ಕ್ಕಿಳಿದಿದೆ. ಉರ್ದು 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಉರ್ದು ಭಾಷಿಕರ ಸಂಖ್ಯೆ ಶೇ.5.01ರಿಂದ ಶೇ.4.19ಕ್ಕಿಳಿದಿದೆ. ಶೇ.4.74 ಮಾತೃಭಾಷಿಕರನ್ನು ಹೊಂದಿರುವ ಗುಜರಾತಿ 6ನೇ ಸ್ಥಾನಕ್ಕೇರಿದೆ.


ಸಂಬಂಧಿತ ಟ್ಯಾಗ್ಗಳು

Hindi Kannada ಮಾತೃ ಭಾಷೆ ಬಹಿರಂಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ