ರೈತರ ಸಾಲ ಮನ್ನಾ ಖಚಿತ ಸಿಎಂ ಮತ್ತೆ ಭರವಸೆ

Farmers loan waiver confirm cm kumaraswamy again guaranteed

27-06-2018

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನಾಡ ಪ್ರಭು ಕೆಂಪೇಗೌಡ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಫ್ರೀಡಂ ಪಾರ್ಕ್ ನಿಂದ ಗಾಯತ್ರಿ ವಿಹಾರ ಅರಮನೆ ಮೈದಾನದವರೆಗೆ ಬೃಹತ್ ಜಾಥಾದಲ್ಲಿ ತೆರಳಲಿದ ಮೆರವಣಿಗೆ ಅರಮನೆ ಮೈದಾನದಲ್ಲಿ ಮುಕ್ತಾಯಗೊಂಡಿತು.

509ನೇ ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ವಿವಿಧ ಕಲೆಯನ್ನು ಪ್ರದರ್ಶಿಸಿದವು. ಹುಲಿವೇಷ, ಪೂಜಾಕುಣಿತ, ಜಾನಪದ ಕಲಾತಂಡಗಳು, ಹಾಗೂ ಕೆಂಪೇಗೌಡರ ಸ್ತಬ್ಧಚಿತ್ರದ ಮೆರವಣಿಗೆ ನಡೆಯಿತು.

ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಮೇಯರ್ ಸಂಪತ್ ರಾಜ್, ನಗರದ ನಾಲ್ಕೂ ಕಡೆಯ ಗೋಪುರದಿಂದ ಮೆರವಣಿಗೆ ಫ್ರೀಡಂ ಪಾರ್ಕ್ಗೆ ಆಗಮಿಸುತ್ತಿದೆ. ಇಲ್ಲಿಂದ ಅರಮನೆ ಮೈದಾನಕ್ಕೆ ಬೃಹತ್ ಜಾಥಾ ತೆರಳಲಿದೆ. ಬಿಬಿಎಂಪಿ ಸಿಬ್ಬಂದಿಗಳು ಹಾಗೂ ನೌಕರರಿಗೂ ಮಧ್ಯಾಹ್ನದವರೆಗೆ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ತಿಳಿಸಲಾಗಿದೆ ಎಂದರು. ಒಕ್ಕಲಿಗರ ಸಂಘದ ವತಿಯಿಂದ ವಿವಿ ಪುರಂ ಸೇರಿದಂತೆ, ಕೆಂಪಾಬುಧಿ ಕೆರೆ, ಮೇಖ್ರಿ ಸರ್ಕಲ್, ಲಾಲ್ ಬಾಗ್ ಹಾಗೂ ಮಾಗಡಿಯಿಂದ ಜ್ಯೋತಿಯ ಮೆರವಣಿಗೆ ಫ್ರೀಡಂ ಪಾರ್ಕ್ ನತ್ತ ಹೊರಟಿದೆ.

ಇನ್ನು ಕೆಂಪಾಬುಧಿ ಕೆರೆ ಬಳಿಯಿರುವ ಕೆಂಪೇಗೌಡ ಗೋಪುರಕ್ಕೆ ಅಲಂಕರಿಸಿ ಅಲ್ಲಿಂದ ಹೊರಟ ಜ್ಯೋತಿಯ ಮೆರವಣಿಗೆಗೆ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕೆಂಪೇಗೌಡ ಜಯಂತಿಯನ್ನು ಸರ್ಕಾರದ ವತಿಯಿಂದ ಎರಡು ವರ್ಷಗಳಿಂದ ಆಚರಣೆ ಮಾಡ್ತಾ ಇದ್ದೇವೆ. ಬೆಂಗಳೂರನ್ನು ಕಟ್ಟಿ ಬೆಳೆಸಿದ ಕೆಂಪೇಗೌಡರ ಜಯಂತಿಯನ್ನು ದಸರಾ ಮಹೋತ್ಸವದ ರೀತಿ ಆಚರಣೆ ಮಾಡಬೇಕು.

ಅರಮನೆ ಮೈದಾನದಲ್ಲಿನ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ. ಮೂರು ವರ್ಷ ಮಳೆಯಾಗದೆ ರೈತರು ಕಷ್ಟಪಟ್ಟಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು ಮುಂದುವರಿದಿದ್ದೇನೆ. ಇದರಿಂದ ಸಮ್ಮಿಶ್ರ ಸರ್ಕಾರಕ್ಕೇನು ತೊಂದರೆಯಿಲ್ಲ ಎಂದು ಹೇಳಿದರು.

ಸಮುದಾಯದ ಹಲವು ಬೇಡಿಕೆಗಳಿವೆ. ಆ ಬೇಡಿಕೆಗೆ ನನ್ನ ಧ್ವನಿಯೂ ಸೇರಲಿದೆ. ಸ್ಕಿಲ್ ಡೆವಲಪ್ಮೆಂಟ್ ವಿವಿ ಸ್ಥಾಪನೆ ಚಿಂತನೆಯಿದೆ, ಅದನ್ನು ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ. ಉದ್ಯೋಗ ಸಮಸ್ಯೆಗೆ ಪರಿಹಾರ ಇಲ್ಲಿ ಸಿಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನಿಂದಲೇ 65% ಆದಾಯ ಬರುತ್ತಿದೆ. ಆ ಆದಾಯವನ್ನ ಉ.ಕ.ನೀರಾವರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಮತ್ತೆ ಮಾಧ್ಯಮಗಳ ಮೇಲೆ ಹರಿಹಾಯ್ದ ಸಿಎಂ, ಇನ್ನೂ ಸರ್ಕಾರ ರಚನೆಯಾಗಿ ತಿಂಗಳಾಗಿಲ್ಲ, ಆಗಲೇ ಉತ್ತರ ಕರ್ನಾಟಕ‌ ನಿರ್ಲಕ್ಷ್ಯ ಅಂತ ವರದಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಾವು ಪ್ರಾದೇಶಿಕವಾರು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಇಡೀ ರಾಜ್ಯದ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದೇವೆ.

ರಾಜ್ಯವನ್ನು ಉತ್ತರ, ದಕ್ಷಿಣ ಅಂತ ಹಂಚುವುದು ಬೇಕಿಲ್ಲ ಎಂದು ಎಚ್ಚರಿಸಿದರು. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯಾದರೆ ನನಗೂ, ಡಿಕೆಶಿಗೂ ಸ್ವಲ್ಪ ನೆಮ್ಮದಿ. ಇಲ್ಲಾಂದ್ರೆ ತಮಿಳುನಾಡಿನವರು ಮತ್ತೆ ಕ್ಯಾತೆ ತೆಗೆಯುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ