‘ಮದ್ಯಪಾನ ನಿಷೇಧದಿಂದ ನಾಡಿಗೆ ಒಳಿತು’26-06-2018

ಬೆಂಗಳೂರು: ಮದ್ಯಪಾನ ನಿಷೇಧ ಮಾಡಿದರೆ ನಾಡಿಗೆ ಒಳಿತಾಗಲಿದ್ದು ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಬೇಕು ಎಂದು ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಒತ್ತಾಯಿಸಿದರು.

ನಗರದ ಕುಮಾರಕೃಪಾದ ಗಾಂಧಿ ಭವನದಲ್ಲಿ ಮಂಗಳವಾರ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು ಮದ್ಯಪಾನ ನಿಷೇಧದಿಂದ ನಾಡಿಗೆ ಒಳಿತಾಗಲಿದೆ ಸಮಾಜದ ಸ್ಥಿತಿಗತಿಯೂ ಉತ್ತಮಗೊಳ್ಳಲಿದೆ ಮುಖ್ಯಮಂತ್ರಿಗಳು ಎಚ್ಚೆತ್ತು, ಸಂಪೂರ್ಣವಾಗಿ ಮದ್ಯಪಾನ ನಿಷೇಧ ರಾಜ್ಯವನ್ನಾಗಿ ಘೋಷಿಸಬೇಕು ಎಂದರು.

ಸಹಾಯಕ ಪೊಲೀಸ್ ಆಯುಕ್ತ ಕೆ.ನಾರಾಯಣ ಸ್ವಾಮಿ ಮಾತನಾಡಿ, ನಗರದಲ್ಲಿ ಆಫ್ರಿಕಾ, ನೈಜೀರಿಯಾ, ಸೂಡಾನ್ ನ ಪ್ರಜೆಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ  ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ ಎಂದರು.

ಇತ್ತಿಚಿನ ದಿನಗಳಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜಿನಲ್ಲಿ ಓದುತ್ತಿರುವ ಶ್ರೀಮಂತ ವಿದ್ಯಾರ್ಥಿಗಳಿಗೆ ಕೋಕೇನ್, ಕೊಳಗೇರಿ ಹಾಗೂ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗಾಂಜಾದಂತಹ ಮಾದಕ ವಸ್ತುಗಳನ್ನು ಸರಬರಾಜು ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಕಾಲೇಜು ಸುತ್ತಮುತ್ತ ಐಸ್ ಕ್ರೀಂ, ಬೊಂಡಾ, ಸೇರಿದಂತೆ ಇನ್ನಿತರ ತಿನಿಸುಗಳ ಜೊತೆ ಸೇರಿಸಿ ಮಾದಕ ವ್ಯಸನಗಳಿಗೆ ದೂಡಲು ಪ್ರಯತ್ನಿಸುತ್ತಾರೆ. ಹೀಗಾಗಿ, ನೀವು ತಿನ್ನುವ ತಿನಿಸುಗಳ ರುಚಿಯಲ್ಲಿ ವ್ಯತ್ಯಾಸ, ತಲೆಸುತ್ತುನಂತಹ ಬದಲಾವಣೆ ಹಾಗೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಪೊಲೀಸ್ ಸಹಾಯವಾಣಿ 100ಕ್ಕೆ ಕರೆಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ರಂಗಭೂಮಿ ತಜ್ಞ ಅಬ್ದುಲ್ಲಾ, ಮದ್ಯಪಾನ ಮಂಡಳಿ ಮಾಜಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಸೇರಿ ಪ್ರಮುಖರಿದ್ದರು.


ಸಂಬಂಧಿತ ಟ್ಯಾಗ್ಗಳು

alcohol Drugs ವ್ಯಸನ ಕೋಕೇನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ