ರಾಜ್ಯ ಬಿಜೆಪಿ ನಾಯಕರೊಂದಿಗೆ ಬಿಎಸ್ವೈ ನಿವಾಸದಲ್ಲಿ ಸರಣಿ ಸಭೆ

BSY meetings with state BJP leaders at his resident!

26-06-2018

ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸ ಇದೀಗ ಚಟುವಟಿಕೆಯ ತಾಣವಾಗಿದೆ. ಪ್ರಮುಖ ಮುಖಂಡರೊಂದಿಗೆ ಯಡಿಯೂರಪ್ಪ ಸರಣಿ ಸಭೆ ನಡೆಸುತ್ತಿದ್ದಾರೆ.

ಗುಜರಾತ್ ನ ಅಹಮದಾಬಾದ್ ನಿಂದ‌ ಹಿಂದಿರುಗಿದ ಬಳಿಕ ಪಕ್ಷದ ಪ್ರಮುಖ ನಾಯಕರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ‌ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವರನ್ನು ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು. ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ, ಲೋಕಸಭಾ ಚುನಾವಣೆಗಳ ಪೂರ್ವ ತಯಾರಿ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿದ ಸೂಚನೆಯಂತೆ ಸಭೆ ನಡೆಸಿ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು.

ಯಡಿಯೂರಪ್ಪ ಜೊತೆ ಮಾತುಕತೆ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಲೋಕಸಭೆ ಚುನಾವಣೆಗೆ ಪೂರ್ವ ತಯಾರಿ ನಡೆಸುವ ಸಂಬಂಧ ಮಾತುಕತೆ ನಡೆಸಿದ್ದೇವೆ. ಕಳೆದ ಬಾರಿ 17ಸ್ಥಾನ ಗೆದ್ದಿದ್ದೆವು, ಈ ಬಾರಿ ಹೈಕಮಾಂಡ್ ನಮ್ಮ ರಾಜ್ಯದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ, ಹಾಗಾಗಿ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಗೆಲ್ಲುವ ತಯಾರಿ ನಡೆಸಲು ಪಕ್ಷ ಸಂಘಟನೆ ಮಾಡಲು ಚರ್ಚೆ ನಡೆಸಲಾಯಿತು ಎಂದರು.

ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಯಿತು. ಪ್ರತಿ ಜಿಲ್ಲೆ ಹಾಗು ಕ್ಷೇತ್ರದ ಉಸ್ತುವಾರಿ ನೀಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು ಎಂದರು. ಸಧ್ಯದಲ್ಲೇ ಎದುರಾಗಲಿರುವ ಲೋಕಸಭಾ ಉಪ‌ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹಾಗು 2019ರ ಲೋಕಸಭಾ ಚುನಾವಣೆಗೆ ತಯಾರಿ, ಅಭ್ಯರ್ಥಿ ಆಯ್ಕೆಯಾದ ಸಂಬಂಧವೂ ಮಾತುಕತೆ ನಡೆಸಲಾಗಿದೆ ಎಂದರು.

ಮಂಡ್ಯ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಿಲ್ಲ, ಮೈತ್ರಿ ಸರ್ಕಾರದ ಅಭ್ಯರ್ಥಿ ಯಾರು ಎನ್ನುವುದನ್ನು ನೋಡಿಕೊಂಡು ಆಯ್ಕೆ ಮಾಡಲಾಗುತ್ತದೆ, ನಾನು ಮೂರು ವರ್ಷ ಮಂಡ್ಯ ಜಿಲ್ಲೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸ್ಪರ್ಧೆಗೆ ಸಿದ್ಧ ಎನ್ನುವ ಸುಳಿವು ನೀಡಿದರು.


ಸಂಬಂಧಿತ ಟ್ಯಾಗ್ಗಳು

R.ashok B.S.Yeddyurappa ಉಸ್ತುವಾರಿ ಸುಳಿವು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ