ಯುವ ಸಮುದಾಯಕ್ಕೆ ಡಿಜಿಪಿ ಸಂದೇಶ

Anti-Drug Day: awareness and the key points by dgp

26-06-2018

ಬೆಂಗಳೂರು: ಮಾದಕ ವಸ್ತುಗಳ ಸೇವನೆಯ ಮೇಲೆ ಹದ್ದಿನ ಕಣ್ಣಿಟ್ಟು ಮಾದಕ ವಸ್ತುಗಳ ಮಾರಾಟಗಾರರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಅಗತ್ಯವನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಪ್ರತಿಪಾದಿಸಿದ್ದಾರೆ.

ಯುವ ಸಮುದಾಯ ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ವ್ಯಸನಮುಕ್ತ ವಿಶ್ವ, ವ್ಯಸನಮುಕ್ತ ದೇಶವನ್ನು ಮಾಡಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವ ಜಾಲವನ್ನೂ ಮಟ್ಟಹಾಕಬೇಕಾದ ಪರಿಣಾಮಕಾರಿ ಕೆಲಸವನ್ನೂ ಮಾಡಬೇಕು ಎಂದು ಸಲಹೆ ನೀಡಿದರು.

ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ ಹಾಗೂ ಪೊಲೀಸರಿಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ಸೇವನೆ ಮಾಡುವವರಿಗಿಂತ ಮಾರಾಟ ಮಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದು ಅತಿಮುಖ್ಯ ಎಂದರು.

ಶಾಲಾ-ಕಾಲೇಜು ಸೇರಿದಂತೆ ವಸತಿ ನಿಲಯಗಳ ಬಳಿ ಅಧಿಕ ಮಾದಕ ಸೇವನೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು .ಇತ್ತೀಚೆಗೆ ಯುವ ಜನರೇ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಹೆಚ್ಚು ಬೆಳಕು ಚೆಲ್ಲಬೇಕು. ಇದು ಪ್ರತಿಯೊಬ್ಬ ಯುವಜನರಿಗೂ ತಲುಪುವಂತಾಗಬೇಕು. ಆಗ ಮಾತ್ರ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು.

ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಪೊಲೀಸರ ಇಂದಿನ ತನಿಖಾ ವಿಧಾನ ಬದಲಾಗಬೇಕು. ಅದೇ ರೀತಿ, ಹೊಸ ತಂತ್ರಜ್ಞಾನ ಬಳಕೆಯಲ್ಲೂ ಪೊಲೀಸರು ಮುಂದಾಗಬೇಕು ಎಂದು ಸಲಹೆ ಮಾಡಿದರು. ಕಾರ್ಯಾಗಾರದಲ್ಲಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಮುಖರಿದ್ದರು.


ಸಂಬಂಧಿತ ಟ್ಯಾಗ್ಗಳು

Drugs anti drugs ನಿರ್ದೇಶಕ ಆತಂಕಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ