ರಾಜ್ಯ ಕಾವೇರಿ ನಿರ್ವಹಣಾ ಸಮಿತಿಗೆ ಸದಸ್ಯರ ನೇಮಕ

Government appointed to the Cauvery Management Committee

25-06-2018

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ನಾವು ಕೇಂದ್ರ ಸರ್ಕಾರದ ಜೊತೆಗಾಗಲೀ ಅಥವಾ ನ್ಯಾಯಾಲಯದ  ಜೊತೆಗಾಗಲೀ ಸಂಘರ್ಷಕ್ಕಿಳಿದಿಲ್ಲ. ನಮಗೆ ನ್ಯಾಯಬೇಕು ಎಂದು ಪ್ರಧಾನಿಗೆ ಮತ್ತು ನ್ಯಾಯಾಲಯಕ್ಕೆ ವಿನಯಪೂರ್ವಕ ಮನವಿ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾವೇರಿ ನಿರ್ವಹಣಾ ಸಮಿತಿಗೆ ಸದಸ್ಯರ ನೇಮಕ ಕುರಿತಂತೆ ನಡೆದ ಸಭೆ ಬಳಿಕ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಕಾವೇರಿ ನಿರ್ವಹಣಾ ಸಮಿತಿ ರಚನೆ ವಿಷಯದ ಬಗ್ಗೆ ಜೂನ್ 18ರಂದೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮತ್ತು ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ವೈಯಕ್ತಿಕ ಮನವಿಯನ್ನೂ ಸಲ್ಲಿಸಿದ್ದರು‌. ಸಭೆ ಕರೆಯುವ ಭರವಸೆ ನೀಡಿದ್ದ ಪ್ರಧಾನ ಮಂತ್ರಿಗಳು ರಾತ್ರೋ ರಾತ್ರಿ ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡಿದ್ದಾರೆ. ಅವರು ನಮ್ಮ ಅಹವಾಲು ಕೇಳಿಲ್ಲ ಎಂದು ಶಿವಕುಮಾರ್ ಹೇಳಿದರು.

ಪ್ರಾಧಿಕಾರದಲ್ಲಿ ಆರು ಜನ ಇದ್ದರೂ ಕೋರಂ ಎಂದು ಪರಿಗಣಿಸಿ ನಿರ್ಧಾರ ಕೈಗೊಳ್ಳಬಹುದು‌. ಇದಕ್ಕೆ ರಾಜ್ಯ ಸರ್ಕಾರ ತನ್ನ  ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಅಡ್ವೋಕೇಟ್ ಜನರಲ್ ಮತ್ತು ಕಾನೂನು ತಜ್ಞರ ಸಲಹೆ ಪಡೆದಿದೆ. ಜೊತೆಗೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೂ ತರಬೇಕಿದೆ‌ ಎಂದರು.

ಜುಲೈ 2ರಂದು ಕಾವೇರಿ ನಿರ್ವಹಣಾ ಸಮಿತಿ ಸಭೆ ಕರೆದಿದೆ. ರಾಜ್ಯದ ಗೈರು ಹಾಜರಿಯಲ್ಲಿ ಮತ್ತಷ್ಟು ವಿರೋಧದ ನಿರ್ಧಾರ ಕೈಗೊಳ್ಳುವ ಆತಂಕದಿಂದ ಜಲಸಂಪನ್ಮೂಲ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾವೇರಿ ನೀರಾವರಿ ನಿಗಮದ ಎಂಡಿ ಹೆಚ್.ಎಲ್.ಪ್ರಸನ್ನ ಅವರನ್ನು ರಾಜ್ಯದ ಪ್ರತಿನಿಧಿಗಳಾಗಿ ಕಳುಹಿಸಲು ನಿರ್ಧರಿಸಲಾಗಿದೆ.  ಜೊತೆಗೆ ಮುಂಬರುವ ಲೋಕಸಭಾ ಅಧಿವೇಶನಕ್ಕೆ ಮುಂಚೆ ಸರ್ವಪಕ್ಷ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ವಿಧಾನಸಭೆಯ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆರೋಪ ಮಾಡಿದಂತೆ ಸರ್ಕಾರ ಎಲ್ಲೂ ವಿಳಂಬ ಮಾಡಿಲ್ಲ. ದೂಷಿಸೋದು ಬಿಜೆಪಿಯವರ ಕೆಲಸ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಪ್ರತಿಪಕ್ಷದ ಪ್ರಮುಖರಿಗೂ ಮನವಿ ಮಾಡುತ್ತೇವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ