ಬಿಜೆಪಿಯವರು ನುಡಿದಂತೆ ನಡೆಯುವವರಲ್ಲ.ಅಚ್ಛೇ ದಿನ್ ಯಾರಿಗೂ ಬಂದಿಲ್ಲ !

Kannada News

26-05-2017

ಬೆಂಗಳೂರು:- ಪ್ರಧಾನಿ ನರೇಂದ್ರ ಮೋದಿ ಅವರದ್ದು ಯುಟರ್ನ್ ಸರ್ಕಾರ. ಬಿಜೆಪಿಯವರು ನುಡಿದಂತೆ ನಡೆಯುವವರಲ್ಲ. ಈ ವರೆಗೂ ಅಚ್ಛೇ ದಿನ್ ಎಂಬುದು ಯಾರಿಗೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಮೂರು ವರ್ಷದ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು, ನರೇಂದ್ರ ಮೋದಿ ಅವರ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಜನರಲ್ಲಿ ನಿರೀಕ್ಷೆಗಳ ಮೂಟೆಯನ್ನು ಕಟ್ಟಿ, ಆಶಾಗೋಪುರ ನಿರ್ಮಾಣ ಮಾಡಿದ್ದೇ ಅವರ ದೊಡ್ಡ ಸಾಧನೆ. ಕೇಂದ್ರದ ಆಡಳಿತ ಬಾಯಿ ತುಂಬಾ ಬಡಾಯಿ, ಕೆಲಸ ಮಾತ್ರ ಶೂನ್ಯ ಎಂಬಂತೆ ಆಗಿದೆ ಎಂದು ವ್ಯಂಗ್ಯವಾಡಿದರು. 
ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಜಾರಿಗೆ ಬಂದಿದ್ದ ಕಾರ್ಯಕ್ರಮಗಳನ್ನು ಇದೇ ನರೇಂದ್ರ ಮೋದಿಯವರು ಟೀಕಿಸಿದ್ದರು. ಆಧಾರ್ ಕಾರ್ಡ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಜಿಎಸ್ಟಿಲ ಕುರಿತು ಅವರು ಏನು ಹೇಳಿದ್ದರು ಎಂಬುದು ಗೊತ್ತಿದೆ. ಇದೇ ಯೋಜನೆಗಳ ಬಗ್ಗೆ ಈಗ ಅವರಾಡುವ ಮಾತುಗಳೇನು ಎಂಬುದೂ ತಿಳಿದಿದೆ ಎಂದು ಸಿಎಂ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯವರು ಹೇಳಿದ್ದಿಷ್ಟು.ಜಿಎಸ್ಟಿಯ ಯುಪಿಎ ಸರ್ಕಾರದ ಕೂಸು. ಅದನ್ನು ಜಾರಿಗೆ ತರಲು ಹೊರಟಾಗ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ತೀವ್ರ ವಿರೋಧ ಮಾಡಿದ್ದರು. ಈಗ ಅದನ್ನೇ ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ.ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳಿಗೆ ಈಗ ಬೇರೆ ಹೆಸರು ಕೊಡಲಾಗಿದೆ. ಯೋಜನಾ ಆಯೋಗಕ್ಕೆ ನೀತಿ ಆಯೋಗ ಎಂದು ಹೆಸರಿಡಲಾಗಿದೆ. ಹೆಸರು ಬದಲಾಗಿದ್ದು ಹೊರತುಪಡಿಸಿದರೆ ಅದರಲ್ಲಿ ವಿಶೇಷವೇನಿಲ್ಲ. ಬದಲಾವಣೆಯಿಂದ ಅನುಕೂಲವೂ ಆಗಲಿಲ್ಲ. ನಿರ್ಮಲ ಭಾರತ ಸಹ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆ. ಈಗ ಅದು ಸ್ವಚ್ಛ ಭಾರತ ಆಗಿದೆ. ಜೊತೆಗೆ ಯೋಜನೆಯ ಪ್ರಚಾರಕ್ಕೆ ಸಾಕಷ್ಟು ಹಣ ಸಹ ಖರ್ಚು ಮಾಡಲಾಗಿದೆ. ನಿರ್ಮಲ ಮತ್ತು ಸ್ವಚ್ಛ ಪದಗಳಲ್ಲಿ ಅಂತಹ ವ್ಯತ್ಯಾಸವೇನಿದೆ. ರಾಜೀವ್ ಗಾಂಧಿ  ವಿದ್ಯುದೀಕರಣ, ರಾಜೀವ್ ಆವಾಸ ಯೋಜನೆಯ ಹೆಸರೂ ಬದಲಾಗಿದೆ. ನರ್ಮ್ ಯೋಜನೆಯನ್ನು ಕೈ ಬಿಟ್ಟು ಈಗ ಅಮೃತ್ ಹೆಸರಲ್ಲಿ ಆ ಕಾರ್ಯಕ್ರಮ ಜಾರಿಗೆ ತರಲು ಹೊರಟಿದ್ದಾರೆ. 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ನಾವು ಒಪ್ಪಿದ್ದೇವೆ. ಅದನ್ನು ಜಾರಿಗೆ ತರುವುದರ ಮೂಲಕ ರಾಜ್ಯಗಳಿಗೆ ಹೆಚ್ಚು ಹಣವನ್ನು ನೀಡಲಾಗುವುದು ಎಂದು ಹೇಳುತ್ತಾ ಎಲ್ಲ ವಲಯದ ಕೇಂದ್ರ ಪುರಸ್ಕತ ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. ವಿಧಾನ ಮಂಡಲದ ಉಭಯ ಸದನಗಳಲ್ಲಿಯೂ ನಾನು ಈ ವಿಚಾರ ತಿಳಿಸಿದ್ದೇನೆ. ಕೇಂದ್ರ ಪುರಸ್ಕತ ಯೋಜನೆಗಳಿಗೆ ಶೇ.80, ಶೇ. 90ರಷ್ಟು ಇದ್ದ ಅನುದಾನದ ಪ್ರಮಾಣ ಶೇ.30, ಶೇ.40ಕ್ಕೆ ಇಳಿದಿದೆ. ರಾಜ್ಯಗಳಿಗೆ ಆರ್ಥಿಕವಾಗಿ ಶಕ್ತಿ ತುಂಬವ ಕೆಲಸವನ್ನು ಕೇಂದ್ರ ಸರ್ಕಾರ ಎಲ್ಲಿ ಮಾಡಿದೆ? ದೇಶದಲ್ಲಿ ವರ್ಷಕ್ಕೆ ಒಂದೂವರೆ ಕೋಟಿ ಪದವೀಧರರು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಹೇಳಿದ್ದರು. ಕೇಂದ್ರ ಸರ್ಕಾರದ ಅಂಕಿ-ಆಂಶ ಪ್ರಕಾರವೇ ಹೇಳುವುದಾದರೆ ಈವರೆಗೆ ಸೃಷ್ಟಿಯಾಗಿರುವ ಉದ್ಯೋಗಗಳ ಸಂಖ್ಯೆ ಕೇವಲ ನಾಲ್ಕು ಲಕ್ಷ. ಈ ವರೆಗೆ ಆರು ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಯುವಕ, ಯುವತಿಯರು ಇವರನ್ನು ನೋಡಿ ಬೆಂಬಲ ಕೊಟ್ಟಿದ್ದೇ ಕೊಟ್ಟಿದ್ದು. ಅವರೆಲ್ಲ ಈಗ ನಿರಾಶರಾಗಿದ್ದಾರೆ. 
ನೋಟು ಅಮಾನ್ಯ ವಿಚಾರದಲ್ಲಿ ಮಾತನಾಡುವಾಗ ಮೋದಿಯವರು ಕಪ್ಪು ಹಣ ಹೊಂದಿರುವವರ ನಿದ್ದೆಗೆಡಿಸುವೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಭಯೋತ್ಪಾದನೆ ಮತ್ತು ನಕ್ಸಲ್ ಸಮಸ್ಯೆಯನ್ನು ತಡೆಯುತ್ತೇವೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದರು. ಒಂದಾದರೂ ಆಗಿದೆಯಾ ? 
ನೋಟು ಅಮಾನ್ಯದ ಬಳಿಕ ಬಂದ ಕಪ್ಪು ಹಣ ಎಷ್ಟು ಎಂಬುದನ್ನು ಯಾರೂ ಹೇಳಿಲ್ಲ. ಆ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಲು ಪ್ರತಿಪಕ್ಷಗಳಿಗೆ ಅವಕಾಶವನ್ನೇ ನೀಡಲಿಲ್ಲ. ಹೋಗಲಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆಯಾ ? ಉದ್ಯೋಗ ಹೆಚ್ಚಾಗಿದೆಯಾ ? ಇಲ್ಲ. ಐಟಿ-ಬಿಟಿ ಸೇರಿದಂತೆ ಹಲವಾರು ವಲಯಗಳಲ್ಲಿ ಇದ್ದ ಉದ್ಯೋಗವೂ ಹೋಗಿದೆ. ನೂರು ದಿನದಲ್ಲಿ ವಿದೇಶದಿಂದ ಕಪ್ಪು ಹಣ ತರುವುದಾಗಿ ಮೋದಿ ಹೇಳಿದ್ದರು. ಮೂರು ವರ್ಷವಾದರೂ ತರಲಿಲ್ಲ. ಮೋದಿ ಅವರು ಈ ಕುರಿತು ಆರಂಭದಲ್ಲಿ ಆವೇಶದಿಂದ ಮಾತನಾಡಿದ್ದರು. ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಆದರೆ ಏನಾಯಿತು? ಹೋಗಲಿ, ಅಚ್ಛೇ ದಿನ್ ಯಾರಿಗೆ ಬಂದಿದೆ ಎಂದು ನನಗಂತೂ ಗೊತ್ತಾಗುತ್ತಿಲ್ಲ. ರೈತರು, ಕಾರ್ಮಿಕರು, ಯುವಕರು, ದಲಿತರಿಗೆ ಯಾರಿಗಾದರೂ ಬಂದಿದೆಯೇ ? ಖಂಡಿತಾ ಇಲ್ಲ. 
ಜನ ಇಂಥದ್ದೇ ಬಟ್ಟೆ ಧರಿಸಬೇಕು. ಇದೇ ಆಹಾರ ಸೇವಿಸಬೇಕು ಎಂದು ಈಗ ಹೇಳಲು ಬಿಜೆಪಿಯವರು ಶುರು ಮಾಡಿದ್ದಾರೆ. ವೈಯಕ್ತಿಕ ಜೀವನ ಮತ್ತು ಜನರ ಹಕ್ಕುಗಳನ್ನು ದಮನ ಮಾಡುವ ಕೆಲಸ ಅವರಿಂದ ಆಗುತ್ತಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತದೆ. ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಪ್ರಚಾರ ನೀಡುವ ಪ್ರಯತ್ನವನ್ನು ಆ ಪಕ್ಷದ ನಾಯಕರು ಮಾಡುತ್ತಿದ್ದಾರೆ. ನಾನು ಎರಡು ಬಾರಿ ಪ್ರಧಾನಿಯವರನ್ನು ಭೇಟಿ ಮಾಡಿ ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಕೋರಿದ್ದೆ. ಆರು ವರ್ಷದಿಂದ ರಾಜ್ಯದಲ್ಲಿ ಬರ ಇದೆ. ಎರಡು ವರ್ಷದಿಂದ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಹೆಚ್ಚಿನ ಪರಿಹಾರ ಕೊಡಿ ಎಂದು ಗೋಗರೆದರೂ ಕೇಳಲಿಲ್ಲ. ಪ್ರತಿ ದಿನ 35 ರೈತರು ಆತ್ಮಹತ್ಮೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸಾಲ ಮನ್ನಾ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹೋಗಲಿ, ಸಂಸತ್ತಿನಲ್ಲಿ ಯಡಿಯೂರಪ್ಪ ಅಥವಾ ಶೋಭಾ ಕರಂದ್ಲಾಜೆ ಒಮ್ಮೆಯಾದರೂ ಈ ಕುರಿತು ಮಾತನಾಡಿದ್ದಾರಾ? ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯವರ ಬಳಿಗೆ ಹೋದಾಗಲೂ ತುಟಿ ಎರಡು ಮಾಡಲಿಲ್ಲ. ಆದರೂ ನಾವು ರೈತರ ಪರ ಎನ್ನುತ್ತಾರೆ. ಯಡಿಯೂರಪ್ಪ ಸಾಲ ಮನ್ನಾ ಮಾಡಿ ಎನ್ನುತ್ತಾರೆ. ಆದರೆ, ಕೇಂದ್ರದ ಕೃಷಿ ಸಚಿವರು ಮತ್ತು ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಸಾಧ್ಯವಿಲ್ಲ ಎನ್ನುತ್ತಾರೆ. ರೈತರ ಅದಾಯ ದ್ವಿಗುಣ ಮಾಡುತ್ತೇವೆ ಎಂಬ ಹೊಸ ರಾಗವನ್ನು ಕೇಂದ್ರ ಸರ್ಕಾರ ಈಗ ಹಾಡುತ್ತಿದೆ. ಇದರ ಬೆನ್ನಿಗೇ ಕೃಷಿ ಆದಾಯಕ್ಕೆ ತೆರಿಗೆ ಹಾಕುವುದಾಗಿ ಹೇಳುತ್ತಿದ್ದಾರೆ. ಆ ರೀತಿ ಮಾಡಲು ಸಾಧ್ಯವೇ? ಕಳೆದ ಮೂರು ವರ್ಷದಲ್ಲಿ ದೇಶದ ಆದಾಯ ಸಹ ಹೆಚ್ಚಾಗಿಲ್ಲ. ಅದು ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದುದಕ್ಕಿಂತ ಕಡಿಮೆ ಆಗಿದೆ. ಇನ್ನು ಬಿಜೆಪಿಯವರು ಅದರಲ್ಲೂ ಪ್ರಧಾನಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರನ್ನು ಮಾತ್ರ ಹೊರಗಿಡುತ್ತಾರೆ ಎಂದು ಮುಖ್ಯಮಂತ್ರಿಯವರು ಟೀಕಿಸಿದರು. ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ