ಕಾಂಗ್ರೆಸ್ ನ ಹಳೆಯ ಚಾಳಿ-ಬಗೆಹರಿಯದ ಬಿಕ್ಕಟ್ಟುಗಳು!

coalition government and congress

25-06-2018

ಬೆಂಗಳೂರು: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಗಮನಿಸಿ. 37ಶಾಸಕರನ್ನು ಹೊಂದಿರುವ ಜೆಡಿಎಸ್ ನಲ್ಲಿ ಮೇಲ್ನೋಟಕ್ಕೆ ಗೊಂದಲಗಳು ಕಡಿಮೆ ಇದ್ದಂತೆ ಇದೆ‌. 79 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಅಸಮಾಧಾನ, ಅಪನಂಬಿಕೆ ಹಾಗೂ ಗೊಂದಲಗಳ ಗೂಡಿನಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮದಡಿ ಕಳೆದ ಎಂಟು ವರ್ಷಗಳಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಜಾಗಕ್ಕೆ ಹೊಸ ಅಧ್ಯಕ್ಷರ ನೇಮಕ 'ಗಜ ಪ್ರಸವ'ದಂತೆ ಕಾಣುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದ್ದರೂ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಕಗ್ಗಂಟಾಗಿದೆ. ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳಾದ ಸುಮಾರು 30ಶಾಸಕರ ಪಟ್ಟಿ ಹಿಡಿದು ಪರಮೇಶ್ವರ್ ಉಜಿರೆಗೆ ತೆರಳಿ ಪ್ರಕೃತಿ ಚಿಕಿತ್ಸೆಯಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಭಾನುವಾರ ಸಂಜೆ ಚರ್ಚಿಸಿದ್ದಾರೆ. ಮೊದಲು, ಸಚಿವ ಸಂಪುಟ ವಿಸ್ತರಣೆಯೊ?ಇಲ್ಲವೆ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿಯೊ ಎನ್ನುವ ಜಿಜ್ಞಾಸೆ ನಡೆದಿದೆ.

ಉತ್ತರ ಕರ್ನಾಟಕ ಭಾಗದಿಂದ ಕಾಂಗ್ರೆಸ್ ನ 40ಮಂದಿ ವಿಧಾನಸಭೆಗೆ ಚುನಾಯಿತರಾಗಿದ್ದಾರೆ. ಆದರೆ, ದಕ್ಕಿರುವುದು ಕೇವಲ ನಾಲ್ಕು ಸಚಿವ ಸ್ಥಾನ ಮಾತ್ರ. ಇನ್ನು, ‌ಜೆಡಿಎಸ್ ನಲ್ಲಂತೂ ಹಳೆಯ ಮೈಸೂರು ಭಾಗದ ಸಚಿವರ ದೊಡ್ಡ ದಂಡೇ ಇದೆ. ಈ ಬೆಳವಣಿಗೆ ಉತ್ತರ ಕರ್ನಾಟಕದ ಸಚಿವ ಆಕಾಂಕ್ಷಿಗಳು ಮತ್ತು ಜನರಲ್ಲಿ ಇದು ಕರ್ನಾಟಕ ಸರ್ಕಾರವೊ? ಹಳೆಯ ಮೈಸೂರು ಪ್ರಾಂತ್ಯದ ಸರ್ಕಾರವೋ? ಎನ್ನುವ ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ರಚನೆಯಾದಾಗ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಿಗಬೇಕಾದಷ್ಟು ಆದ್ಯತೆ ದೊರೆಯಲಿಲ್ಲ. ಎಲ್ಲರ ನಿರೀಕ್ಷೆಗಳು ಹುಸಿಯಾಗುವಂತೆ ಎಂ.ಬಿ.ಪಾಟೀಲ್, ರಾಮಲಿಂಗಾ ರೆಡ್ಡಿ ಹಾಗೂ ಸತೀಶ್ ಜಾರಕಿಹೊಳಿಯಂತಹ ಸಿದ್ದರಾಮಯ್ಯ ಆಪ್ತರನ್ನು ಸಂಪುಟದಿಂದ ದೂರ ಇಡಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವತಃ ತೀವ್ರ ಮುಖಭಂಗ ಅನುಭಿಸಿದ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ರಚನೆಯಲ್ಲಾದ ಹಿನ್ನೆಡೆ ಅನೇಕ ವಿಶ್ಲೇಷಣೆಗೆ ಕಾರಣವಾಗಿತ್ತು. ಆದರೆ, ನಂತರ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದ್ದಲ್ಲದೆ, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮತ್ತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ವೇದಿಕೆಗೆ ಕರೆತಂದಿತು. ಸಿದ್ದರಾಮಯ್ಯ, ಮತ್ತೆ ರಾಜ್ಯ ಕಾಂಗ್ರೆಸ್ ನ ಕೇಂದ್ರ ಸ್ಥಾನಕ್ಕೆ ಬಂದು ಕುಳಿತರು.

ಈಗ, ಸಿದ್ದರಾಮಯ್ಯ ಪಾಲಿಗೆ ತಮ್ಮ ವಿಶ್ವಾಸಿಗರ ಹಿತ ರಕ್ಷಣೆಯ ಹೊಣೆ ಹೆಗಲಿಗೇರಿದೆ. ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಸಿದ್ದರಾಮಯ್ಯ ಅವರ ಪರಿಸ್ಥಿತಿಯನ್ನೇ ಬಳಸಿಕೊಂಡು ಸರ್ಕಾರ ಮತ್ತು ಪಕ್ಷದ ಮೇಲೆ ಹಿಡಿತ ಸಾಧಿಸಿಸುವ ಉಮೇದಿನಲ್ಲಿದ್ದ ಪರಮೇಶ್ವರ್ ಅವರ ವೇಗಕ್ಕೆ ತಡೆಬಿದ್ದಿದೆ.

ಕೆಪಿಸಿಸಿ ಅಧ್ಯಕ್ಷ ಗಾದಿ: ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾದ ಕಾರಣ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರ ನೇಮಕ ಆಗಬೇಕು. ಆದರೆ, ಅಲ್ಲೂ ಕಾಂಗ್ರೆಸ್ ನ ನಿಧಾನಗತಿಯ ಧೋರಣೆ ಮುಂದುವರಿದಿದೆ. ಇದು, ಪಕ್ಷದಲ್ಲಿ ಅನಗತ್ಯ ಗುಂಪುಗಾರಿಕೆ-ವೈಮನಸ್ಸು ಅಪಪ್ರಚಾರಗಳಿಗೆ ಅನುವು ಮಾಡಿಕೊಟ್ಟಿದೆ. ನಿಧಾನಗತಿಯ ನಿರ್ಧಾರಗಳಿಗೂ ಕಾಂಗ್ರೆಸ್ ಗೂ ಅವಿನಾಭಾವ ಸಂಬಂಧ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ತೋರಿದ ಚುರುಕುತನ ಕಾಂಗ್ರೆಸ್ ನಿಂದ ಬೇರೆ ಸಂದರ್ಭಗಳಲ್ಲಿ ಕಂಡಿದ್ದು ಅಪರೂಪ. ತನ್ನ ಮಂದಗತಿಯ ಮನೋಭಾವಕ್ಕೆ ಅನೇಕ ಬಾರಿ ಭಾರೀ ಅನಾಹುತಗಳನ್ನೇ ಎದುರುಗೊಂಡಿದ್ದರೂ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಪಾಠ ಕಲಿತಂತೆ ಇಲ್ಲ.

2019ರ ಲೋಕಸಭಾ ಚುನಾವಣೆಗೆ ಇನ್ನೂ ವರ್ಷಕ್ಕಿಂತ ಕಡಿಮೆ ಅವಧಿ ಇದೆ. ಆದರೂ ನೂತನ ಆಧ್ಯಕ್ಷರ ನೇಮಕಾತಿ ನೆನೆಗುದಿಗೆ ಬಿದ್ದಿದೆ.

ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಬಿ.ಕೆ.ಹರಿಪ್ರಸಾದ್, ಈಶ್ವರ ಖಂಡ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ತೀವ್ರ ಪ್ರಯತ್ನ ನಡೆಸಿದ್ದಾರೆ. ಭಾನುವಾರದಿಂದ ಎಚ್.ಕೆ.ಪಾಟೀಲ್ ಹೆಸರು ಮುಂಚೂಣಿಗೆ ಬಂದಿದೆ.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಚಿವ ಸಂಪುಟ ವಿಸ್ತರಣೆ ಹಾಗೂ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕದ ಬಿಕ್ಕಟ್ಟುಗಳನ್ನು. 2019ರ ಲೋಕಸಭಾ ಚುನಾವಣೆಗೆ ಸಿದ್ಧತೆಗಳ ಹಾದಿ ಸುಗಮಗೊಳ್ಳಬೇಕಂದರೆ ಹೈಕಮಾಂಡ್ ಚುರುಕು ನಿರ್ಣಯಗಳನ್ನು ಕೈಗೊಳ್ಳಲೇ ಬೇಕು.


ಸಂಬಂಧಿತ ಟ್ಯಾಗ್ಗಳು

Lok Sabha KPCC ಹೈಕಮಾಂಡ್ ಅಪನಂಬಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ