ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ಹೋರಾಟ: ಶೋಭಾ ಕರಂದ್ಲಾಜೆ22-06-2018

ಬೆಂಗಳೂರು: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಸರ್ಕಾರ ನಿರ್ಧಾರವನ್ನು ಬಿಜೆಪಿ ಖಂಡಿಸುತ್ತಿದ್ದು ಹಜ್ ಭವನ ಸೇರಿದಂತೆ ಯಾವುದೇ ಸಂಘ ಸಂಸ್ಥೆಗೆ ಸರ್ಕಾರದಿಂದ ಟಿಪ್ಪು ಹೆಸರಿಟ್ಟರೆ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸಿತು. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಕಾಂಗ್ರೆಸ್ ಸೋತಿತು, 130ರಿಂದ 80ಕ್ಕೆ ಶಾಸಕರ ಸಂಖ್ಯೆ ಕುಸಿಯಿತು. ಯಾರಿಗೂ ಬೇಡವಾದ ಟಿಪ್ಪು ಬಗ್ಗೆ ನೀವೇಕೆ ಆಸಕ್ತಿ ವಹಿಸಿದಿರಿ ಎಂದು ಅವರ ಕಾರ್ಯಕರ್ತರೇ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು. ಟಿಪ್ಪು ಜಯಂತಿಗೆ ಕುಟ್ಟಪ್ಪ ಮೊದಲ ಬಲಿಯಾದರು. ಇನ್ನೂ ಹಲವಾರು ಹೋರಾಟಗಾರರು ಕೋರ್ಟ್ ಗೆ ಅಲೆದಾಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತ ಟಿಪ್ಪು ಜಯಂತಿಯಿಂದ ಆಗಿದ್ದರೂ ಈಗ ಸಮ್ಮಿಶ್ರ ಸರ್ಕಾರ ಮತ್ತೆ ಟಿಪ್ಪು ವಿವಾದವನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.

ಹಜ್ ಭವನ ನಿರ್ಮಾಣ ಯಡಿಯೂರಪ್ಪನವರ ಸಂಕಲ್ಪವಾಗಿತ್ತು. ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾಗ ಶಂಕುಸ್ಥಾಪನೆ ಮಾಡಲಾಗಿತ್ತು. ಅಂದಿನ ಕಾರ್ಯಕ್ರಮದ ವೇದಿಕೆಯಲ್ಲಿ‌ ಗ್ಲಾಸ್ ಗಳನ್ನು ಒಡೆದು ಹಾಕಿ ಅನುಚಿತವಾಗಿ ವರ್ತಿಸಿ ಜಮೀರ್ ಅಗೌರವ ತೋರಿದ್ದನ್ನು ಅವರು ಮರೆಯುವಂತಿಲ್ಲ. ಹಜ್ ಭವನದ ಬಗ್ಗೆ ಮಾತನಾಡುವ ನೈತಿಕತೆ ಜಮೀರ್ ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಕಲ್ಪನೆಯ ಕೂಸು ಹಜ್ ಭವನ ಉದ್ಘಾಟನೆಗೊಂಡಿದೆ. ನಮ್ಮ ಅವಧಿಯಲ್ಲಿ ಆರಂಭಗೊಂಡಿದ್ದ ಭವನವನ್ನು ಕಾಂಗ್ರೆಸ್ ಮುಗಿಸಿದೆ. ನಾವು 40ಕೋಟಿ ಬಿಡುಗಡೆ ಮಾಡಿದ್ದು ಕಾಂಗ್ರೆಸ್ 20ಕೋಟಿ ಕೊಟ್ಟಿದೆ, ಹಜ್ ಯಾತ್ರೆಗೆ ಹೋಗುವ ಮುನ್ನ ಯಾತ್ರಿಗಳು ತಂಗುವ ಭವನವನ್ನ ಹಜ್ ಭವನ ಎಂದು ಕರೆಯುತ್ತಾರೆ. ಹಜ್ ಭವನ ಎಂದೇ ದೇಶದಲ್ಲಿ‌ ಕರೆಯಲಿದ್ದಾರೆ. ನಾವು ರಾಜ್ಯದಲ್ಲಿ ‌ಹಜ್ ಭವನ ನಿರ್ಮಿಸುವ ಮುನ್ನ ಯಾತ್ರಿಗಳು ರಸ್ತೆಯಲ್ಲಿ ಮಲಗುತ್ತಿದ್ದರು, ಬಹಳ ಸಮಯ ವಿಮಾನ ನಿಲ್ದಾಣದಲ್ಲಿ ಕಾಯಬೇಕಾದ ಕಾರಣ ಹೀಗಾಗುತ್ತಿತ್ತು. ಅದಕ್ಕೆ ನಮ್ಮ ಸರ್ಕಾರ ಸ್ಪಂದಿಸಿ ಭವನ ನಿರ್ಮಾಣ ಮಾಡಿತು. ಆದರೆ, ಈ ಭವನಕ್ಕೆ ಇದೀಗ ಟಿಪ್ಪು ಹೆಸರಿಡುವ ಹೇಳಿಕೆ ನೀಡಿ‌ ವಿವಾದ ಹುಟ್ಟು ಹಾಕಲಾಗುತ್ತಿದೆ. ಯಾವುದೇ ಕಾರಣಕ್ಕೂ ಟಿಪ್ಪು ಹೆಸರಿಡಲು ಬಿಜೆಪಿ ಒಪ್ಪಲ್ಲ. ಹೋರಾಟ ನಡೆಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಟಿಪ್ಪು ಓರ್ವ ಮತಾಂಧ, ಹಿಂದೂ ದೇವಾಲಯಗಳನ್ನು ನಾಶಪಡಿಸಿದ, ಹಿಂದೂಗಳ ಮತಾಂತರ ಮಾಡಿದ್ದ, ಮತಾಂತರಕ್ಕೆ‌ ಒಪ್ಪದವರನ್ನು ಟಿಪ್ಪು ಡ್ರಾಪ್ ನಿಂದ ತಳ್ಳಿ ಸಾಯಿಸಿದ್ದ, ಮೈಸೂರು ಮಹಾರಾಜರಿಗೆ ಅನ್ಯಾಯ ಮಾಡಿದ್ದ, ಶಿವಪ್ಪನಾಯಕನ ವಂಶವನ್ನು ನಾಶ ಮಾಡಿದ್ದ ಹೀಗಾಗಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ, ಸರ್ಕಾರದಿಂದ ನಾಮಕಾರಣ ಮಾಡುವ ಕಟ್ಟಡಗಳಿಗೆ ಅವನ ಹೆಸರಾಗಲೀ ಇಡಬಾರದು, ಇದನ್ನು ನಾಡಿನ ಜನ ಒಪ್ಪಲ್ಲ, ನಮ್ಮ ಮನವಿಗೆ ಸ್ಪಂದಿಸದೇ ನಿಮ್ಮ ಧೋರಣೆ ಮುಂದುವರೆಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ನೆರೆ ಬಂದು ಜನ ಜಾನುವಾರ ಸತ್ತರೂ ಸರ್ಕಾರ ಸ್ಪಂದಿಸಲಿಲ್ಲ, ಇವತ್ತಿನ ಸರ್ಕಾರ ಹಿಂದಿನ‌ ಸರ್ಕಾರದ ಚಾಳಿ ಮುಂದುವರೆಸುತ್ತಿದೆ, ಅಭಿವೃದ್ಧಿ ಆಗದ ವೇಳೆ ವಿವಾದ ಸೃಷ್ಟಿಸಿ, ಗೊಂದಲ ನಿರ್ಮಾಣ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ಷಡ್ಯಂತ್ರವನ್ನು ಈ ಸರ್ಕಾರವೂ ಮಾಡಿದೆ. ಮಂತ್ರಿಗಳು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿಲ್ಲ, ಖಾತೆ ಗೊಂದಲದಲ್ಲೇ ಸರ್ಕಾರ ಮುಳುಗಿದೆ ಎಂದು ಟೀಕಿಸಿದರು.

ಯಾರು ಯಾವಾಗ ಬೇಕಾದರೂ ಡೈರಿ ಬರೆದುಕೊಳ್ಳಬಹುದು, ಧೈರ್ಯ ಇದ್ದರೆ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿರುವ ಡೈರಿಯನ್ನು ಇಡಿ, ಐಟಿಗೆ ನೀಡಲಿ.  ಯಾವುದೇ ತನಿಖೆ‌‌ ಎದುರಿಸಲು ಬಿಜೆಪಿಯ ಎಲ್ಲಾ ನಾಯಕರೂ ಸಿದ್ಧರಿದ್ದಾರೆ ಎಂದು ಡಿಕೆಶಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು. ಎಲ್ಲಾ ರಾಜಕೀಯ ಪಕ್ಷದಲ್ಲೂ ಉದ್ಯಮಿಗಳಿದ್ದಾರೆ. ಎಲ್ಲಾ ಉದ್ಯಮಿಗಳೂ ಅಕ್ರಮ ಮಾಡಲ್ಲ, ಮಾಡಿದ್ದರೆ ತನಿಖೆಯಾಗಲಿ, ಶಿಕ್ಷೆಯಾಗಲಿ ಎಂದರು.


ಸಂಬಂಧಿತ ಟ್ಯಾಗ್ಗಳು

Shobha Karandlaje tipu sultan ತಿರುಗೇಟು ಉದ್ಯಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ