ಗಲಭೆಗೆ ಪ್ರಚೋದಿಸಿದರೆ ನಿರ್ಧಾಕ್ಷಿಣ್ಯ ಕ್ರಮ:ಪರಮೇಶ್ವರ್

DCM press meet after meeting with police officials

22-06-2018

ಬೆಂಗಳೂರು: ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ಬರ್, ಕೋಮುಗಲಭೆ ಎಬ್ಬಿಸುವವರು ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೇರಿದ್ದರೂ ಸರಿಯೇ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ಅಲ್ಲದೆ, ಪ್ರಚೋದನಾತ್ಮಕ ಹೇಳಿಕೆ ನೀಡಿದರೆ, ಅಂಥವರ ಮೇಲೆ ಕಣ್ಣಿಡಲಾಗುತ್ತದೆ. ಈ ಪ್ರವೃತ್ತಿ ಹೆಚ್ಚಿದರೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರೆದಿದೆ. ಈ ಪ್ರಕರಣ ಭೇದಿಸಿದ ತಂಡವನ್ನು ಸಿಎಂ ಕುಮಾರಸ್ವಾಮಿ ಅವರು ಅಭಿನಂದಿಸಿದ್ದು, ತಾರ್ಕಿಕ ಅಂತ್ಯ ಕಾಣಿಸುವಂತೆ ಸೂಚನೆ ನೀಡಿದ್ದಾರೆ.

ಅಪರಾಧ ಸಂಖ್ಯೆಯಲ್ಲಿ ರಾಜ್ಯ ಹತ್ತನೇ ಸ್ಥಾನ ಪಡೆದುಕೊಂಡಿದೆ. ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಪೊಲೀಸರೆಂದರೆ ಜನರಲ್ಲಿ ಭಯ, ಆತಂಕವಿದೆ. ಈ ಮನೋಭಾವ ಅಳಿಸಿ, ಜನಸ್ನೇಹಿ ಪೊಲೀಸರಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದೇವೆ ಎಂದು ಹೇಳಿದರು.

ಕಾನ್ಸ್‌ಟೇಬಲ್‌ಗಳು ಸಬ್‌ ಬೀಟ್ ಸಿಸ್ಟಮ್‌ ನಡಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಅಲ್ಲಿನ‌ ಆಗು ಹೋಗುಗಳನ್ನು ತಿಳಿದುಕೊಳ್ಳುತ್ತಿದ್ದರು. ಇದರಿಂದ ಅಪರಾಧ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿರುವುದರಿಂದ ಈ ಮಾದರಿಯನ್ನು ಎಲ್ಲ ರಾಜ್ಯಗಳು ಅನುಸರಿಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಕೀರ್ತಿ ಮತ್ತಷ್ಟು ಹೆಚ್ಚಿದೆ. ಗೃಹ ಇಲಾಖೆ ರಾಜ್ಯದ ಮುಖವಾಣಿ ಇದ್ದಂತೆ. ಈ ಇಲಾಖೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಿದರೆ ರಾಜ್ಯ ಸುಭದ್ರವಾಗಿರಲು ಸಾಧ್ಯ ಎಂದರು.

ನೇಮಕಾತಿ ವಿಚಾರದಲ್ಲಿ ಕಳೆದ ಐದು ವರ್ಷದಲ್ಲಿ ಮೂವತ್ತು ಸಾವಿರ ಕಾನ್ಸ್‌ಟೇಬಲ್ ಹಾಗೂ ಇನ್ಸ್ಪೆಪೆಕ್ಟರ್‌ಗಳ ನೇಮಕಾತಿ ಆಗಿದೆ. ಇನ್ನೂ 14ಸಾವಿರ ಕಾನ್ಸ್‌ಟೇಬಲ್ ಹುದ್ದೆ ಖಾಲಿ ಇದ್ದು, ಹಂತ ಹಂತವಾಗಿ ತುಂಬಲಾಗುತ್ತದೆ. ಅಲ್ಲದೆ, ನಿವೃತ್ತಿ ಹೊಂದುವ ಸ್ಥಾನಗಳಿಗೆ ಆಗಾಗ್ಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

G.parameshwar police ನಿವೃತ್ತಿ ನೇಮಕಾತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ