ರೌಡಿ ವಾಟರ್ ಮಂಜನ ಕೊಲೆ: ಆರೋಪಿ ಬಂಧನ

Rowdy water manja murder: accused arrested

22-06-2018

ಬೆಂಗಳೂರು: ನೀರಿನ ಕ್ಯಾನ್‍ಗಳ ವ್ಯಾಪಾರಿಯಾಗಿದ್ದ ರೌಡಿ ಮಂಜುನಾಥ್ ಅಲಿಯಾಸ್ ವಾಟರ್ ಮಂಜನನ್ನು ನಿನ್ನೆ ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಸ್ಥಳೀಯರಿಗೂ ಮಚ್ಚು ತೋರಿಸಿ ಬೆಚ್ಚಿ ಬೀಳಿಸಿದ್ದ ಆರೋಪಿ ಸಿಗೇಹಳ್ಳಿಯ ಚರಣ್‍ ರಾಜ್‍ಗೆ ಕೆ.ಆರ್.ಪುರಂ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಸೀಗೇಹಳ್ಳಿಯ ಚರಣ್‍ ರಾಜ್ (34)ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಈತನ ಜೊತೆ ವಾಟರ್ ಮಂಜನ  ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ರಘು ಹಾಗೂ ಮುರುಳಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸು ವಿಚಾರಕ್ಕೆವುಂಟಾದ ವೈಷಮ್ಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಚರಣ್‍ ರಾಜ್, ರಘು ಹಾಗೂ ಮುರುಳಿ ಜೊತೆ ಸೇರಿ ಮಧ್ಯಾಹ್ನ 1ರ ವೇಳೆ ಮೇಡಹಳ್ಳಿಯ ಹೋಟೆಲ್ ಒಂದರ ಬಳಿ ರೌಡಿ ವಾಟರ್ ಮಂಜನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ತಂಡದಲ್ಲಿದ್ದ  ಕೆ.ಆರ್.ಪುರಂ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಮತ್ತವರ ಸಿಬ್ಬಂದಿ ಇಂದು ಮುಂಜಾನೆ 5ರ ವೇಳೆ ಕಾಡುಗೋಡಿಯ ಕುಂಬೇನ ಅಗ್ರಹಾರದ ಬಳಿ ಆರೋಪಿ ಚರಣ್‍ ರಾಜ್ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಾಹಿತಿಯಾಧರಿಸಿ ಬೆನ್ನಟ್ಟಿತು.

ಜೀಪ್‍ನಲ್ಲಿ ಬಂದ ಪೊಲೀಸರನ್ನು ನೋಡಿದ ಕೂಡಲೇ ಆರೋಪಿಯು ಸ್ಕೂಟರ್ ಅನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿ ಅಡ್ಡಗಟ್ಟಲಾಯಿತಾದರೂ ಸ್ಕೂಟರ್ ನಿಂದ  ಇಳಿದ ಚರಣ್‍ ರಾಜ್, ಓಡಿ ಹೋಗಿ ಪೊದೆ ಒಳಗೆ ತಪ್ಪಿಸಿಕೊಳ್ಳಲು ಯತ್ನಿಸಿದ.

ಕೂಡಲೇ ಜೀಪ್‍ನಿಂದ ಇಳಿದ ಎಎಸ್‍ಐ ಮುನಿರಾಜು ಅವರು ಹಿಡಿಯಲು ಮುಂದಾದರು. ಅಷ್ಟರಲ್ಲಿ ಆರೋಪಿ ಬೆನ್ನ ಹಿಂದೆ ಇಟ್ಟುಕೊಂಡಿದ್ದ ಲಾಂಗ್‍ನ್ನು ತೆಗೆದು ಹಲ್ಲೆಗೆ ಮುಂದಾಗಿದ್ದಾನೆ. ಲಾಠಿ ಅಡ್ಡ ಹಿಡಿದಿದ್ದರಿಂದ ಅವರು ಲಾಂಗ್ ಏಟಿನಿಂದ ತಪ್ಪಿಸಿಕೊಂಡಿದ್ದು, ಅವರ ಜತೆಗಿದ್ದ ಎಎಸ್‍ಐ ನಾರಾಯಣಸ್ವಾಮಿ ಆರೋಪಿಯನ್ನು ಹಿಡಿಯಲು ಹೋದಾಗ ಅವರ ಕೈಗೆ ಹಲ್ಲೆ ನಡೆಸಿ ಓಡ ತೊಡಗಿದ್ದು, ಎಚ್ಚರಿಕೆ ನೀಡಿದರೂ ಶರಣಾಗದಿದ್ದರಿಂದ ಇನ್ಸ್ಪೆಕ್ಟರ್ ಜಯರಾಜ್ ಅವರು ಮೂರು ಸುತ್ತು  ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಗುಂಡು ತಗುಲಿದ ಚರಣ್‍ ರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದು, ಕೈಗೆ ಗಾಯಗೊಂಡಿರುವ ನಾರಾಯಣಸ್ವಾಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಕೊಲೆಯಾದ ವಾಟರ್ ಮಂಜ ನಾಲ್ಕು ವರ್ಷಗಳ ಹಿಂದೆ ಆರೋಪಿ ಚರಣ್‍ ರಾಜ್‍ನಿಂದ 15 ಲಕ್ಷದ ನಿವೇಶವನ್ನು ಖರೀದಿಸಿದ್ದ. ಆದರೆ, ಅದರಲ್ಲಿ ಅರ್ಧ ಹಣ ಕೊಟ್ಟಿದ್ದ ಮಂಜ, ಅದರಲ್ಲಿ ಮನೆ ಕಟ್ಟಿಕೊಂಡಿದ್ದನು. ಬಾಕಿ ಹಣ ನೀಡಿ ನಿವೇಶನ ನೋಂದಣಿ ಮಾಡಿಸಿಕೊಳ್ಳುವಂತೆ ಚರಣ್ ರಾಜ್ ತಾಕೀತು ಮಾಡಿದ್ದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದು ಆಗಾಗ ಜಗಳವಾಗುತ್ತಿತ್ತು. ಮೊನ್ನೆ ರಾತ್ರಿ ಸಂಬಂಧಿಯ ಮನೆ ಮದುವೆಗೆ ಹೋಗಿ ವಾಪಸ್ಸಾಗುತ್ತಿದ್ದ ಮಂಜನನ್ನು ಅಡ್ಡಗಟ್ಟಿದ್ದ ಆರೋಪಿಯು ನಿವೇಶನದ ಬಾಕಿ ಹಣ ನೀಡುವಂತೆ ಕೇಳಿದ್ದನು.

ನನ್ನ ಬಳಿ ಹಣವಿಲ್ಲ. ಸ್ವಲ್ಪದಿನ ಕಾಯುವಂತೆ ಮಂಜುನಾಥ್ ಹೇಳಿದ್ದು, ಇದರಿಂದ ಕೋಪಗೊಂಡ ಚರಣ್‍ ರಾಜ್ ಸ್ನೇಹಿತ ರಘುನನ್ನು ಕರೆದುಕೊಂಡು ಮಂಜನ ಮನೆಗೆ ಹೋಗಿ ಹಣ ಕೊಡು ಇಲ್ಲದಿದ್ದರೆ ನಿವೇಶನವನ್ನು ನಮಗೆ ಮಾರಾಟ ಮಾಡು ಎಂದು ಹೇಳಿದ್ದರಿಂದ ಇಬ್ಬರ ನಡುವೆ ಮತ್ತೆ ಜಗಳವುಂಟಾಯಿತು. ಹಿರಿಯರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಕಳುಹಿಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಚರಣ್‍ ರಾಜ್, ನಿನ್ನೆ ಮಧ್ಯಾಹ್ನ ಮಂಜುನಾಥ್‍ನ ಟೆಂಪೋವನ್ನು ಹಿಂಬಾಲಿಸಿ ನೀರಿನ ಕ್ಯಾನ್‍ಗಳನ್ನು ಇಳಿಸಿ ಬಂದ ಆತನನ್ನು ಮಚ್ಚು. ಲಾಂಗ್‍ಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳೀಯರಿಗೂ ಬೆದರಿಸಿ ಪರಾರಿಯಾಗಿದ್ದರು.


ಸಂಬಂಧಿತ ಟ್ಯಾಗ್ಗಳು

Rowdy Murder ಕ್ಯಾನ್‍ ಪ್ರವೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ