‘ರಾಜ್ಯ ಬಿಜೆಪಿ ನಾಯಕರು ಮೋದಿ ಮೇಲೆ ಒತ್ತಡ ಹೇರಬೇಕು’21-06-2018

ಬೆಂಗಳೂರು: ರಾಜ್ಯದ ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಕರ್ನಾಟಕದ ಬಿಜೆಪಿ ನಾಯಕರು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕು. ಈ ವಿಷಯದಲ್ಲಿ ರಾಜಕೀಯ ಮರೆಯಬೇಕು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲದ ಪ್ರಮಾಣ ಹನ್ನೆರಡರಿಂದ ಹದಿಮೂರು ಕೋಟಿ ರೂಗಳಷ್ಟಿದೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಾಡಿದ ಸಾಲದ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಕೇಂದ್ರ ಸರ್ಕಾರವೂ ನೆರವು ನೀಡಬೇಕು ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಬೇಕು ಎಂದರು.

ಈ ಸಂಬಂಧ ಪ್ರಧಾನಿಯವರ ಬಳಿ ಬಿಜೆಪಿ ನಾಯಕರೂ ಇರುವ ನಿಯೋಗವೊಂದನ್ನು ಮುಖ್ಯಮಂತ್ರಿಗಳು ಕರೆದುಕೊಂಡು ಹೋಗಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದರು.

ರಾಜಕಾರಣದ ಪಾಡಿಗೆ ರಾಜಕಾರಣ ಇರಲಿ, ಚುನಾವಣೆಯ ಕಾಲದಲ್ಲಿ ಎಲ್ಲರೂ ರಾಜಕೀಯ ಮಾಡೋಣ. ಆದರೆ ಇದು ರೈತರ ವಿಷಯ. ರಾಜ್ಯದ ವಿಷಯ. ಕಳೆದ ಮೂರು ವರ್ಷಗಳಿಂದ ಮಳೆ ಬೀಳದೆ ರೈತರು ಕಂಗಾಲಾಗಿದ್ದಾರೆ. ಅವರ ಸಾಲ ಮನ್ನಾ ಆಗಬೇಕಿರುವುದು ತುರ್ತು ಅಗತ್ಯ ಎಂದು ವಿವರಿಸಿದರು. ರಾಜ್ಯದ ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡಬೇಕಿಲ್ಲ. ಬದಲಿಗೆ ರೈತರ ಸಮಸ್ಯೆಗೆ ಸ್ಪಂದಿಸಬೇಕು. ನಿಯೋಗದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ರೈತರ ಸಾಲಮನ್ನಾ ಮಾಡಲು ಕೇಂದ್ರ ನೆರವು ನೀಡಬೇಕು ಎಂದು ಕೋರಬೇಕು ಎಂದರು.

ಒಂದು ವೇಳೆ ಕೇಂದ್ರ ಸರ್ಕಾರ ನೆರವು ನೀಡದಿದ್ದರೆ ರಾಜ್ಯ ಸರ್ಕಾರ ತನ್ನ ಮಿತಿಯಲ್ಲಿ ಸಹಕಾರ ಸಂಘಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ರೈತರ ಎಂಟೂವರೆ ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಿತ್ತಾದರೂ ಈ ಪೈಕಿ ಐದು ಸಾವಿರ ಕೋಟಿ ರೂಗಳನ್ನು ಇನ್ನೂ ಬಿಡುಗಡೆ ಮಾಡಬೇಕಿದೆ.

ಈಗ ಅದು ಸೇರಿ ಹನ್ನೆರಡರಿಂದ ಹದಿಮೂರು ಸಾವಿರ ಕೋಟಿ ರೂಗಳಷ್ಟು ರೈತರ ಸಾಲ ಮನ್ನಾ ಆಗಬೇಕಿದೆ ಎಂದ ಅವರು, ಕೇಂದ್ರ ಸರ್ಕಾರ ಕೂಡಾ ನೆರವು ನೀಡಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಈ ಮಧ್ಯೆ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿ.ಆರ್.ಎಫ್ ಅಡಿ ಏಳು ಸಾವಿರ ಕೋಟಿ ರೂಗಳನ್ನು ಆಡಳಿತಾತ್ಮಕವಾಗಿ ಮಂಜೂರು ಮಾಡಿದೆ. ಆದರೆ ಇದನ್ನು ಪ್ರತಿ ವರ್ಷ ಐದು ಸಾವಿರ ಕೋಟಿ ರೂಗಳಂತೆ ಕೊಡುವುದಾಗಿ ಹೇಳಿದೆ. ಆದರೆ, ಇದು ಯಾವ ಕಾರಣಕ್ಕೂ ಸಾಲುವುದಿಲ್ಲ. ಹೀಗಾಗಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಪೆಟ್ರೋಲ್, ಡೀಸೆಲ್‍ನಿಂದ ರಾಜ್ಯದಲ್ಲಿ ಲಭ್ಯವಾಗುವ ಸುಂಕದಲ್ಲಿ ಐನೂರು ಕೋಟಿ ರೂಗಳಷ್ಟು ಹಣವನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಆದರೆ ಪ್ರತಿ ವರ್ಷ ಐನೂರು ಕೋಟಿ ರೂ. ನೀಡಿದರೆ ಆಡಳಿತಾತ್ಮಕವಾಗಿ ಮಂಜೂರಾದ ಹಣ ನಮಗೆ ದಕ್ಕಲು ಹದಿನಾಲ್ಕು ವರ್ಷಗಳು ಬೇಕು ಎಂದು ಹೇಳಿದರು.

ಈ ಮಧ್ಯೆ ರಾಜ್ಯದಲ್ಲಿ ಮಳೆಗಾಲ ಉತ್ತಮವಾಗಿರುವುದರಿಂದ ಬಹುತೇಕ ಕಡೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಹೀಗಾಗಿ ಜನರ ಸಂಚಾರಕ್ಕೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಪ್ರತಿ ಕಿಮಿ ರಸ್ತೆಯಲ್ಲಿನ ಗುಂಡಿ ಮುಚ್ಚಲು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂಗಳನ್ನು ಒದಗಿಸಲಾಗುವುದು ಮತ್ತು ಹದಿನೈದು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಇದರಲ್ಲಿ ಗುಂಡಿಗಳನ್ನು ಮುಚ್ಚಲು ಜಲ್ಲಿ ಹಾಗೂ ಸಿಮೆಂಟ್ ಮಿಶ್ರಿತ ಮರಳನ್ನು ಉಪಯೋಗಿಸಲಾಗುವುದು. ಮಳೆಗಾಲ ಇನ್ನೂ ಬಾಕಿ ಇರುವುದರಿಂದ ಮಳೆಗಾಲ ಮುಗಿದ ನಂತರ ಡಾಂಬರು ಹಾಕುವ ಕೆಲಸ ಮಾಡಲಾಗುವುದು ಎಂದು ಅವರು ವಿವರಿಸಿದರು.

ರಸ್ತೆಗಳ ಜತೆ ಸೇತುವೆಗಳಲ್ಲಿನ ಗುಂಡಿಗಳನ್ನೂ ಮುಚ್ಚುವುದಾಗಿ ಸ್ಪಷ್ಟಪಡಿಸಿದ ಅವರು, ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಹರಿಯುವುದರಿಂದ ಅಲ್ಲಿ ಸಂಚರಿಸದಂತೆ ಜನರನ್ನು ಎಚ್ಚರಿಸಲು ಗಸ್ತು ವ್ಯವಸ್ಥೆಯನ್ನು ರೂಪಿಸಬೇಕು ಎಂದು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದ ಮಡಿಕೇರಿ-ಸಂಪಾಜೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ನ್ಯಾಷನಲ್ ಹೈವೇ ಅಥಾರಿಟಿಗೆ ಹಸ್ತಾಂತರ ಮಾಡಲಾಗಿದೆ. ಇದೇ ರೀತಿ ಮೂವತ್ತನೇ ತಾರೀಖಿನಂದು ಸಂಪಾಜೆ-ಮಾಣಿ ರಸ್ತೆಯನ್ನು ಕೂಡಾ ಹಸ್ತಾಂತರಿಸಲಾಗುವುದು ಎಂದರು. ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವಣ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸಲುವಾಗಿ ಮಡಿಕೇರಿ-ತಲಚೇರಿ ರಸ್ತೆಯನ್ನು ಅಭಿವೃದ್ದಿಪಡಿಸಲು ಸೂಚನೆ ನೀಡಲಾಗಿದೆ ಎಂದರು.

ತುಮಕೂರು-ಶಿವಮೊಗ್ಗದ ನಡುವೆ ನಾಲ್ಕು ಪಥ ರಸ್ತೆ ನಿರ್ಮಿಸುವುದು ಸೇರಿದಂತೆ ಹಲವು ಹೆದ್ದಾರಿಗಳ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸಜ್ಜಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಚಾರ್ಮಾಡಿ ಘಾಟ್ ಹಾಗೂ ಶಿರಾಡಿ ಘಾಟ್‍ಗಳಲ್ಲಿ ಸಂಚಾರಕ್ಕೆ ಅತ್ಯುತ್ತಮ ರಸ್ತೆಗಳನ್ನು ಒದಗಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ನಾನು ಮಂತ್ರಿಯಾದ ನಂತರ ರಾಜ್ಯದ ವಿವಿಧ ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಿದ್ದು ಅಗತ್ಯವಿರುವ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಹೇಳಿದರು. ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು ಆರು ಸಾವಿರ ರೂ ಭತ್ಯೆ ನೀಡುವುದು, ಹೆರಿಗೆ ಭತ್ಯೆ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳ ಜಾರಿ ಸಂಬಂಧ ಜೂನ್ ಇಪ್ಪತ್ತೈದರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ಹಣಕಾಸು ಲಭ್ಯತೆಯ ಕುರಿತು ಚರ್ಚಿಸಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Revanna Farmers ಚಾರ್ಮಾಡಿ ಶಿರಾಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ