ರೈತರ ಸಾಲ ಮನ್ನಾ ಖಚಿತ:ಸಿಎಂ ಕುಮಾರಸ್ವಾಮಿ

Farmers

19-06-2018

ಬೆಂಗಳೂರು: ಪ್ರೆಸ್ ಕ್ಲಬ್ ನ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರೈತರ ಸಾಲಮನ್ನಾ ವಿಚಾರದಲ್ಲಿ ನನ್ನ ಕಮಿಟೆಮೆಂಟ್ ಇದೆ. ರೈತರ ಸಾಲಮನ್ನಾ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ಬಳಿಯೂ ಮನವಿ ಮಾಡಿದ್ದೇನೆ. ಸಾವಿರಾರು ಕೋಟಿ ಸಾಲಮನ್ನಾ ಮಾಡಬೇಕಿದೆ. ಸರ್ಕಾರ ಯಂತ್ರದಲ್ಲಿ ಸೋರಿಕೆ ತಡೆಯಬೇಕು. ಸಾವಿರಾರು ಕೋಟಿ ಹಣ ಒದಗಿಸಿಬೇಕಾಗಿದೆ. ಜುಲೈ ಮೊದಲನೇ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಕೆಲವೊಂದು ಸಲಹೆಗಳನ್ನ ಪಡೆದುಕೊಂಡು ಬಂದಿದ್ದೀನಿ. ನಾನು ಕೆಲವೊಂದು ವಿಚಾರಗಳನ್ನ ಅವರ ಮುಂದೆ ಇಟ್ಟಿದ್ದೇನೆ ಎಂದು ತಿಳಿಸಿದರು. ಸಾಲಮನ್ನಾ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯದ ಜನತೆಗೆ ಹೊರೆಯಾಗದಂತೆ ರೈತರ ಸಾಲಮನ್ನಾ ಮಾಡಲು ಬದ್ದ ಎಂದು ಮುಖ್ಖಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಕಾವೇರಿ ನಿರ್ವಹಣ ಮಂಡಳಿ ರಚನೆ ವಿಚಾರದ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚೆ ಮಾಡಿದ್ದೇನೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಅವೈಜ್ಞಾನಿಕವಾಗಿದೆ. ಮಂಡಳಿಗೆ ಇಬ್ಬರ ಹೆಸರು ಕೊಡಲು ಹೇಳಿದ್ದರು. ಆದರೆ ಇನ್ನು ನಾನು ಕೊಡಲಿಲ್ಲ. ನ್ಯಾಯಾಂಗ ನಿಂದನೆ ಆದರೆ ನಾನು ನೋಡಿಕೊಳ್ಳುತ್ತೇನೆ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಾಂದರ್ಭಿಕ ಶಿಶು ಅನ್ನೋ ಪದದ ಅರ್ಥ ಎಷ್ಟೊ ಜನರಿಗೆ ಅರ್ಥ ಆಗಿಲ್ಲ. ಏನೇನೋ ವ್ಯಾಖ್ಯಾನ ಕೊಡುತ್ತಿದ್ದಾರೆ ಎಂದ ಕುಮಾರಸ್ವಾಮಿ, ಸಿದ್ದರಾಮಯ್ಯ ರವರಿಗೆ ರೆಸ್ಟ್ ಗೆ ಹೋಗಿ ಅಂತ ನಾವು ಹೇಳಿಲ್ಲ. ಮೂರು ತಿಂಗಳು ನಿರಂತರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಧರ್ಮಸ್ಥಳಕ್ಕೆ ಹೋಗಿ ರೆಸ್ಟ್ ಮಾಡಿದ್ದಾರೆ. ನಾವು ಯಾರು ಹೇಳಿಲ್ಲ ಅವರಿಗೆ ಹೋಗೋಕೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಯಶಸ್ವಿನಿ ಯೋಜನೆಯನ್ನ ಮುಂದುವರೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ.ಆದರೆ ಕೇಂದ್ರ ಸರ್ಕಾರದ ಯೋಜನೆಯಡಿ ಸೇರಿಸಬೇಕೆಂಬ ಪ್ರಸ್ತಾಪ ಇದೆ. ಹಾಗಾಗಿ, ಎರಡು ತಿಂಗಳು ಪ್ರಾಥಮಿಕವಾಗಿ ಜಾರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಂದು ಹೆಚ್.ಡಿ.ಕುಮಾರಸ್ವಾಮಿ ವಿವರಿಸಿದರು.

ಉನ್ನತ ಶಿಕ್ಷಣ ಇಲಾಖೆಗೆ ಪ್ರೊ.ರಂಗಪ್ಪ ನೇಮಕ ಮಾಡುವ ಯಾವುದೇ ವಿಚಾರ ಪ್ರಸ್ತಾಪ ಆಗಿಲ್ಲ. ನನ್ನ ಬಳಿ ಆ ರೀತಿ ಯಾವ ಹೆಸರು ಇಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದೀನಿ ಅಷ್ಟೇ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದು ಟೀಂ ಕರೆಸಿಕೊಂಡಿದ್ದರು, ಜುಲೈನಲ್ಲಿ ಅಂತಿಮ ತೀರ್ಪು ಬರಲಿದೆ, ಅಂತಿಮ ತೀರ್ಪು ಬಂದ ಬಳಿಕ ನಮ್ಮ ಮುಂದಿನ ನಡೆ ಎಂದರು. ಎಲ್ಲ ಸಮುದಾಯದ  ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ಇದೆ. ಆದರೆ, ಅದಕ್ಕೆ 630 ಕೋಟಿ ಸರ್ಕಾರಕ್ಕೆ ಬೇಕಾಗುತ್ತದೆ. ಎಲ್ಲರಿಗೂ ಅನುಕೂಲವಾಗುವಂತ ನಿರ್ಧಾರ ತೆಗದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Farmers ಅನುಕೂಲ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ