ದೇಶಾದ್ಯಂತ ಗೋವುಗಳ ಮಾರಾಟ ನಿಷೇಧ !

Kannada News

26-05-2017

ನವದೆಹಲಿ:- ದೇಶಾದ್ಯಂತ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಪ್ರಾಣಿಗಳ ವ್ಯಾಪಾರಕ್ಕೆ ಹೊರಡಿಸಿರುವ ಹೊಸ ಆದೇಶದನ್ವಯ ಗೋವುಗಳನ್ನು ಭೂಮಾಲೀಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಾಣಿಗಳ ಕಲ್ಯಾಣ ಹೆಸರಿನಲ್ಲಿ ನಿನ್ನೆ ಹೊರಡಿಸಲಾದ ಅಧಿಸೂಚನೆ ಗೋವುಗಳ ರಕ್ಷಣೆಗೆ ಹೊರಡಿಸಲಾದ ಕೇಂದ್ರ ಸರ್ಕಾರದ ಮೊದಲ ಆದೇಶವಾಗಿದೆ. ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸ್ಲಿಂರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ. ಹರಿಯಾಣ ಮೂಲದ ಹಾಲು ಉತ್ಪಾದಕ ಪೆಹ್ಲೂಖಾನ್ ಅವರ ಮೇಲೆ ಗೋ ರಕ್ಷಕರ ಪಡೆ ಏಪ್ರಿಲ್ 1 ರಂದು ರಾಜಸ್ತಾನದಲ್ಲಿ ಹಲ್ಲೆ ನಡೆಸಿದ ನಂತರ 4 ದಿನಗಳಲ್ಲಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದರು.
ಕಳೆದ ಒಂದು ತಿಂಗಳ ಹಿಂದೆ ಅಸ್ಸಾಂನಲ್ಲಿ ಇಬ್ಬರು ಗೋ ವ್ಯಾಪಾರಸ್ಥರು ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದಾರೆ, ಎಂಬ ಸಂಶಯದ ಮೇಲೆ ಅವರಿಗೆ ಹಿಂಸೆ ನೀಡಲಾಗಿತ್ತು. ಈಶಾನ್ಯ ಭಾರತದ ಬಹುತೇಕ ಭಾಗಗಳು ಮತ್ತು ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ.
ಗೋವುಗಳನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು, ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕಲ್ಲ, ಎಂದು 1960ರ ಪ್ರಾಣಿಗಳ ಹಿಂಸಾಚಾರ ತಡೆ ಕಾಯ್ದೆಯ ವಿಶೇಷ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಜಾನುವಾರುಗಳನ್ನು ಗಮನದಲ್ಲಿಟ್ಟುಕೊಂಡು ಈ ಷರತ್ತನ್ನು ವಿಧಿಸಲಾಗಿತ್ತು. ತಾನು ಕೃಷಿಕ ಎಂಬುದನ್ನು ಸಾಬೀತುಪಡಿಸುವ ವ್ಯಕ್ತಿಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ. 8 ಪುಟಗಳನ್ನೊಳಗೊಂಡ ನಿಷೇಧ ಆದೇಶದನ್ವಯ ಅಂತರ್ರಾಷ್ಟ್ರೀಯ ಗ‌ಡಿಯಲ್ಲಿ 50 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದನಗಳ ಸಂತೆಗಳಿರಬಾರದು, ರಾಜ್ಯದ ಗಡಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ಸಂತೆಗಳಿಗೆ ಅವಕಾಶ ನೀಡದಿರಲು ಪರಿಸರ ಸಚಿವಾಲಯ ಕ್ರಮ ಕೈಗೊಂಡಿದೆ. ಯಾವುದೇ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಸಾಗಿಸಬೇಕಾದರೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ