ಪ್ರೊ.ರಂಗಪ್ಪ ನೇಮಕಕ್ಕೆ ಬಿಜೆಪಿ ವಿರೋಧ

BJP

19-06-2018

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊಫೆಸರ್ ರಂಗಪ್ಪ ಅವರ ನೇಮಕಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹಾಗೂ ಗೋ.ಮಧುಸೂಧನ್, 'ಮೈಸೂರು ಹಾಗೂ ಕರ್ನಾಟಕ ಮುಕ್ತ ವಿವಿಗಳಿಗೆ ಅಪಕೀರ್ತಿ ತಂದವರು ಮಾಜಿ ಕುಲಪತಿ ಪ್ರೊ.ರಂಗಪ್ಪ. ನಕಲಿ ಅಂಕಪಟ್ಟಿ ಹಾಗೂ ಅಂತಾರಾಜ್ಯಗಳಲ್ಲಿ ಅಕ್ರಮವಾಗಿ ಎಂಜಿನಿಯರಿಂಗ್ ಕೋರ್ಸ್ ಆರಂಭಿಸಿ ಅವ್ಯವಹಾರ ನಡೆಸಿದ್ದರು. ಈ ಅವ್ಯವಹಾರಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಂಗಪ್ಪ ಕಾರಣ. ಅಂತಹ ವ್ಯಕ್ತಿಯನ್ನು ಉನ್ನತ ಶಿಕ್ಷಣ ಪರಿಷತ್ ಚೇರಮನ್ ಹುದ್ದೆಗೆ ನೇಮಕ ಮಾಡುವ ಯತ್ನ ನಡೆದಿದೆ' ಎಂದು ಆರೋಪಿಸಿದರು.

'ಕಳಂಕಿತ ವ್ಯಕ್ತಿಯನ್ನು ಉನ್ನತ ಶಿಕ್ಷಣ ಪರಿಷತ್ ಹುದ್ದೆಗೆ ನೇಮಕ ಮಾಡದಿರಿ, ರಂಗಪ್ಪ ಅವರನ್ನು ನೇಮಕ ಮಾಡಿದರೆ ಸದನದ ಒಳಗೆ ಹಾಗೂ ಹೊರಗೆ ಉಗ್ರ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಸಿದರು. ರಂಗಪ್ಪ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು.

ದೇವೇಗೌಡರ ಮೊಮ್ಮಗಳನ್ನು‌ ಪ್ರೊ.ರಂಗಪ್ಪ ಅವರ ಮಗನಿಗೆ ಮದುವೆ  ಮಾಡಿಕೊಡಲಾಗಿದೆ. ಅದಕ್ಕಾಗಿಯೇ ಇವರನ್ನು ಕ್ಯಾಬಿನೆಟ್ ಸ್ಥಾನಮಾನ ನೀಡಿ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಮಾಡಲು ಹೊರಟಿದ್ದಾರೆ. ದೇವೇಗೌಡರ ಮತ್ತೊಬ್ಬ ಬೀಗರು ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವರಾಗಿದ್ದಾರೆ. ಇದುವರೆಗೆ ಅಪ್ಪ-ಮಕ್ಕಳ ಸರ್ಕಾರ ಎನ್ನಲಾಗುತ್ತಿತ್ತು.ಇನ್ನು ಮುಂದೆ ಬೀಗರ ಸರ್ಕಾರ ಎನ್ನಬಹುದೇ ಎಂದು ಗೋ.ಮಧುಸೂದನ್ ವ್ಯಂಗ್ಯವಾಡಿದರು.

 ಈಗಾಗಲೇ ರಂಗಪ್ಪನವರ ಅಕ್ರಮಗಳ ಬಗ್ಗೆ ವಿಧಾನ ಪರಿಷತ್ ನ ಸದನ ಸಮಿತಿ ವರದಿಯನ್ನು ಸಲ್ಲಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೂ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದು. ಕುಮಾರಸ್ವಾಮಿ ಯವರು ರಂಗಪ್ಪನವರನ್ನು ಉನ್ನತ ಶಿಕ್ಷಣದ ಸಲಹೆಗಾರರಾಗಿ ನೇಮಕ ಮಾಡಿಕೊಂಡ ಮರುಕ್ಷಣವೇ ಸಿಬಿಐ ತನಿಖೆ ಪ್ರಾರಂಭವಾದರೆ ರಾಜ್ಯ ಸರ್ಕಾರಕ್ಕೆ ಎಂತಹಾ ಮಂಗಳಾರತಿ ಆಗುತ್ತದೆ ಎಂಬುದನ್ನು ಕುಮಾರಸ್ವಾಮಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

 


ಸಂಬಂಧಿತ ಟ್ಯಾಗ್ಗಳು

Professor rangappa BJP ಉನ್ನತ ಶಿಕ್ಷಣ ಅವ್ಯವಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ