ಕಳೆದ 13 ವರ್ಷಗಳಲ್ಲೇ ಈ ಬಾರಿ ಅತ್ಯಧಿಕ ಮಳೆ

The highest rainfall this time in the past 13 years

18-06-2018

ಬೆಂಗಳೂರು: ರಾಜ್ಯದಲ್ಲಿ  ಕಳೆದ ಹತ್ತು ದಿನಗಳಲ್ಲಿ ಸುರಿದ ಮುಂಗಾರು ಮಳೆಯು ಕಳೆದ 13 ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣದಲ್ಲಿ ಸುರಿದ ದಾಖಲೆ ಮಳೆಯಾಗಿರುವುದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಮಾಹಿತಿಯಲ್ಲಿ ಕಂಡುಬಂದಿದೆ.

ಮುಂಗಾರು ಅವಧಿಯ ಮೊದಲ 10 ದಿನಗಳ ಮಳೆಯ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ ಜೂ.1ರಿಂದ ಜೂ.10ರವರೆಗೆ ವಾಡಿಕೆಯಂತೆ ರಾಜ್ಯಾದ್ಯಂತ ಸರಾಸರಿ 51 ಮಿ.ಮೀ. ಮಳೆ ದಾಖಲಾಗಬೇಕು. ಆದರೆ ಈ ವರ್ಷ 92 ಮಿ.ಮೀ. ದಾಖಲಾಗಿದ್ದು, 2004ರ ನಂತರದಲ್ಲಿ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಮಳೆ ಇದಾಗಿದೆ.

2004ರಲ್ಲಿ ಇದೇ ಸಮಯದಲ್ಲಿ 99 ಮಿ.ಮೀ. ಮಳೆ ದಾಖಲಾಗಿತ್ತು. ಜೂ.8ರಿಂದ ಮಲೆನಾಡು, ಕರಾವಳಿಯಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಜೂ.15ರವರೆಗಿನ ಮಳೆ ಪ್ರಮಾಣ ಹೋಲಿಸಿದರೆ 13 ವರ್ಷದ ದಾಖಲೆಯನ್ನೂ ಮುರಿಯುವ ಸಾಧ್ಯತೆಯಿದೆ. 1991ರಲ್ಲಿ 10 ದಿನಗಳಲ್ಲಿ 167 ಮಿ.ಮೀ. ಮಳೆ ಸುರಿದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಮಾಹಿತಿ ನೀಡಿದೆ.

ಇನ್ನು ಜೂ.1ರಿಂದ ಜೂ.10ರವರೆಗೆ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿದ ಮಳೆ 17 ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದು ವರದಿಯಾಗಿದೆ.  ಜೂ.20ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಬ್ಬರ ಮುಂದುವರಿಯುವ ಎಚ್ಚರಿಕೆ ನೀಡಲಾಗಿದ್ದು, ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ನಗರದಲ್ಲಿ ಕಳೆದ 10 ದಿನಗಳಿಂದ ನಿರಂತರ ಭಾರಿ ಮಳೆ ಸುರಿಯುತ್ತಿದೆ. ವಾತಾವರಣ ಕೂಡ ತಂಪಾಗಿದ್ದು, ಬೆಳಗಿನ ಜಾವ ಹಾಗೂ ಸಂಜೆಯ ಸಮಯ ಮಳೆರಾಯ ಆರ್ಭಟ ನಡೆಸಿದ್ದು ಇದು ದಾಖಲೆ ಪ್ರಮಾಣದ್ದಾಗಿದೆ.


ಸಂಬಂಧಿತ ಟ್ಯಾಗ್ಗಳು

climate Natural Disaster ನೈಸರ್ಗಿಕ ವಾಡಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ