ಲಾರಿ ಮುಷ್ಕರ: ಜನಸಮಾನ್ಯರಿಗೆ ಎದುರಾಗಲಿದೆ ಸಂಕಷ್ಟ!

Lorry strike against diesel rates hike!

18-06-2018

ಬೆಂಗಳೂರು: ಡೀಸಲ್ ದರ ಹಾಗೂ ಥರ್ಡ್ ಪಾರ್ಟಿ ಪ್ರೀಮಿಯಂ ಹೆಚ್ಚಳ ಖಂಡಿಸಿ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಲಾರಿ ಮಾಲೀಕರು ಇಂದಿನಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಮಂಗಳವಾರದಿಂದ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಮುಷ್ಕರದ ಹಿನ್ನೆಲೆಯಲ್ಲಿ ಸರಕು ಸಾಗಾಣೆಯಲ್ಲಿ ಭಾರಿ ವ್ಯತ್ಯಯ ಕಂಡುಬರಲಿದೆ. ದೇಶದ ಇತರ ಭಾಗಗಳಿಂದ ನಗರಕ್ಕೆ ಬರುತ್ತಿದ್ದ ಲಾರಿಗಳ ಪೈಕಿ ಶೇ.90 ರಷ್ಟು ಸಂಪೂರ್ಣ ಸ್ಥಗಿತಗೊಂಡಿದ್ದು ಮಂಗಳವಾರದಿಂದ ಮತ್ತಷ್ಟು ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿವೆ.

ಮುಷ್ಕರದಿಂದ ಅಕ್ಕಿ, ಗೋದಿ, ತರಕಾರಿ ಸೇರಿದಂತೆ ವಿವಿಧ ದಿನ ನಿತ್ಯದ ಅಗತ್ಯಗಳ ಸರಬರಾಜಿನಲ್ಲಿ ವ್ಯತ್ಯವಾಗಲಿದ್ದು ಜನಸಮಾನ್ಯರಿಗೆ ಸಂಕಷ್ಟ ಎದುರಾಗಲಿದೆ. ಬೆಂಗಳೂರಿನಲ್ಲಿ ಮೂರು ಲಕ್ಷ ಸೇರಿ ರಾಜ್ಯದಲ್ಲಿ  9 ಲಕ್ಷದ 30 ಸಾವಿರ ಲಾರಿಗಳೂ ಹಾಗು ದೇಶಾದ್ಯಂತ 93 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಂಡಿವೆ.

ವೈಟ್‍ ಫೀಲ್ಡ್ ನಲ್ಲಿರುವ ಕಂಟೇನರ್ ಗೂಡ್‍ ಶೆಡ್ ಮುಷ್ಕರದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಲಾರಿಗಳು ಯಾವುದೇ ಸರಕು ಸಾಗಾಣೆ ಮಾಡದೆ ನಿಂತಲ್ಲಿಯೇ ನಿಂತುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಲಾರಿಗಳು ನಿಂತುಕೊಂಡಿವೆ.  ಯಶವಂತಪುರ ದೇವರಾಜ ಟರ್ಮಿನಲ್, ಎಪಿಎಂಸಿ ಸೇರಿದಂತೆ ರಾಜ್ಯ ಹಾಗು ರಾಷ್ಟ್ರ ಹೆದ್ದಾರಿಯಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿವೆ.

ಥರ್ಡ್ ಪಾರ್ಟಿ ಪ್ರೀಮಿಯಂ ಹಣವನ್ನು 27 ಸಾವಿರದಿಂದ 48 ಸಾವಿರಕ್ಕೆ ಹೆಚ್ಚಳ ಮಾಡಿರುವುದು ಹಾಗು ಡೀಸೆಲ್ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಷ್ಕರರಕ್ಕೆ ಅಖಿಲ ಭಾರತ ಸಂಘಟನೆ ಕರೆ ನೀಡಿದ್ದು ರಾಜ್ಯದಲ್ಲಿಯೂ ಲಾರಿ ಮಾಲೀಕರ ಸಂಘ ಮತ್ತು ಅಖಿಲ ಭಾರತ ಸರಕು ಮತ್ತು ಸೇವಾ ಸರಬರಾಜು ವಾಹನಗಳ ಮಾಲೀಕರ ಒಕ್ಕೂಟದಿಂದ ಮುಷ್ಕರ ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರ ಪದೇ ಪದೇ ಡೀಸಲ್-ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಇದರಿಂದಾಗಿ ಲಾರಿ ಮಾಲೀಕರು ಮತ್ತು ಸಿಬ್ಬಂದಿಗೆ ಅಧಿಕ ಹೊರೆಯಾಗುತ್ತಿದೆ. ಈ ಸಂಬಂಧ ಹಲವು ಬಾರಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಅಖಿಲ ಭಾರತ ಸಂಘಟನೆ ಪದೇ ಪದೇ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಒಕ್ಕೂಟ ಆರೋಪಿಸಿದೆ.

ದೇಶಾದ್ಯಂತ 93 ಲಕ್ಷಕ್ಕೂ ಅಧಿಕ ಸರಕು ಸಾಗಾಣೆ ವಾಹನಗಳು ತಮ್ಮ ಬೇಡಿಕೆ ಈಡೇರುವತನಕ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಥರ್ಡ್ ಪಾರ್ಟಿ ಪ್ರೀಮಿಯಂ ಹಣವನ್ನು 1117ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಶೀಘ್ರ ಸರ್ಕಾರ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಒಕ್ಕೂಟದ ಮುಖಂಡರು ಎಚ್ಚರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ