ಕಲ್ಬುರ್ಗಿ ಹತ್ಯೆ ಪ್ರಕರಣ: ಎಸ್ಐಟಿಗೆ ನೀಡಲು ಚಿಂತನೆ!

M.M.Kalburgi murder case: government planning to hand over the case to SIT!

16-06-2018

ಬೆಂಗಳೂರು: ಧಾರವಾಡದಲ್ಲಿ ನಡೆದಿದ್ದ ಖ್ಯಾತ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹತ್ಯೆಯ ಪ್ರಕರಣವನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ)ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗೌರಿ ಹತ್ಯೆ ಪ್ರಕರಣದ ತನಿಖೆಯು ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಸಿದ ನಂತರ ಎಂ.ಎಂ.ಕಲ್ಬುರ್ಗಿ ಹತ್ಯೆಯ ಪ್ರಕರಣವನ್ನು ಡಿಸಿಪಿ ಅನುಚೇತ್ ತನಿಖಾಧಿಕಾರಿಯಾಗಿರುವ ಎಸ್‍ಐಟಿಗೆ ವಹಿಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ಸಂಬಂಧ ಒಂದೆರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಲಿದೆ.

ಎಂ.ಎಂ.ಕಲ್ಬುರ್ಗಿ ಹತ್ಯೆಯ ನಡೆದು ವರ್ಷಗಳೆ ಕಳೆದಿರುವುದರಿಂದ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ವಹಿಸುವುದು ಸಾಧ್ಯವಾಗಲಿದೆಯೇ ಇಲ್ಲವೇ ಎನ್ನುವುದರ ಪರಾಮರ್ಶೆ ನಡೆಸಲಾಗುತ್ತಿದೆ, ಅಲ್ಲದೇ ಗೌರಿ ಹತ್ಯೆ ಪತ್ತೆಗೆ ರಚಿಸಲಾಗಿದ್ದ ಎಸ್‍ಐಟಿ ತಂಡದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಗೌರಿ ಹತ್ಯೆಯಂತೆ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಭೇದಿಸುವುದು ಕಷ್ಟಕರ ಏಕೆಂದರೆ ಮೂರು ವರ್ಷಗಳ ಹಿಂದೆ ನಡೆದಿರುವ ಎಂ.ಎಂ.ಕಲ್ಬುರ್ಗಿ ಹತ್ಯೆಯ ಸಂಬಂಧ ಆ ಪ್ರದೇಶದ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸುವುದು ಆಸಾಧ್ಯ ಗೌರಿ ಹತ್ಯೆಯ ಸಂಬಂಧ ಕೇವಲ 5 ತಿಂಗಳಲ್ಲಿ 1.5 ಕೋಟಿಗೆ ಹೆಚ್ಚು ಕರೆಗಳ ವಿವರಗಳನ್ನು ದಾಖಲಿಸಿದ್ದೇವೆ ಎಂದು ಎಸ್‍ಐಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆಗೆ ಬಳಸಿದ ಮಾದರಿಯ ಪಿಸ್ತೂಲನ್ನು ಎಂ.ಎಂ.ಕಲ್ಬುರ್ಗಿ ಹತ್ಯೆಗೂ ಬಳಸಿದ್ದಾರೆ ಎನ್ನುವ ಮಾಹಿತಿ ಇದ್ದರೂ ಅದನ್ನು ಆಧರಿಸಿ ಹಂತಕರನ್ನು ಪತ್ತೆಹಚ್ಚುವುದು ಆಸಾಧ್ಯ, ಇದಲ್ಲದೇ ಗೌರಿ ಹತ್ಯೆ ಸಂಬಂಧ ಬಂಧಿತರಾಗಿರುವ ಪರಶುರಾಮ್ ವಾಘ್ಮೋರೆ, ಅಮೋಲ್ ಕಾಳೆ ಸೇರಿದಂತೆ ಐವರು ನಮಗೆ ಎಂ.ಎಂ.ಕಲ್ಬುರ್ಗಿಯ ಹತ್ಯೆ ಸಂಬಂಧ ಯಾವುದೇ ಮಾಹಿತಿ ನೀಡಿಲ್ಲ ವಿಚಾರಣೆಯಲ್ಲಿ ಅವರ ಕೈವಾಡವಿಲ್ಲದಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

ಗೌರಿ ಹತ್ಯೆಯ ನಂತರ ವಿಚಾರವಾದಿ ಕೆ.ಎಸ್.ಭಗವಾನ್ ಕೊಲೆಗೆ ಬಂಧಿತ ಆರೋಪಿಗಳು ಸಂಚು ರೂಪಿಸಿದ್ದರು. ಇವರ ಹಿಟ್ ಲಿಸ್ಟ್ ನಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಕೂಡಾ ಇರುವುದು ತನಿಖೆಯಲ್ಲಿ ಕಂಡುಬಂದಿದೆ, ಆರೋಪಿಗಳು ಹಿಂದೂ ವಿರೋಧಿಗಳನ್ನು ಹತ್ಯೆಗೈಯುವುದನ್ನು ಗುರಿಯಾಗಿಸಿಕೊಂಡಿದ್ದರು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ