ನಾನೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿ: ಜಯಚಂದ್ರ

I

16-06-2018

ಬೆಂಗಳೂರು: ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ, ಅತಿ ಚಿಕ್ಕ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷ ಸೇರಿದೆ‌. ಕಿರಿಯ ವಯಸ್ಸಿನಲ್ಲೇ ವಿಧಾನ ಸಭೆ ಪ್ರವೇಶಿಸಿದೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕೋಸ್ಕರವೇ ದುಡಿದಿದ್ದೇನೆ. ಪಕ್ಷ ಸಂಘಟನೆ ಮಾಡಿದ್ದೇನೆ ಹಲವು ಬಾರಿ ಸಚಿವನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ 5 ವರ್ಷ ಅವಧಿಯಲ್ಲಿ, ಹಲವು ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಸರ್ಕಾರದ ಉಳುವಿಗೆ ಟೊಂಕ ಕಟ್ಟಿ‌ನಿಂತಿದ್ದೇನೆ. ಕೆಪಿಸಿ‌ಸಿ‌ ಅಧ್ಯಕ್ಷರಾದ ಡಾ||ಜಿ.ಪರಮೇಶ್ವರ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯನವರು ಸೇರಿದಂತೆ ಎಲ್ಲರ ಬಳಿ ಚರ್ಚಿಸಿದ್ದೇನೆ. ಪಕ್ಷ ನನಗೆ ಜವಾಬ್ದಾರಿ‌‌ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಸೂಕ್ತ ಸಂದರ್ಭದಲ್ಲಿ ‌ಪಕ್ಷದ ವರಿಷ್ಠರು ಸೋನಿಯಾ ಗಾಂಧಿ ಹಾಗು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನ‌ ಭೇಟಿ‌ ಮಾಡುತ್ತೇನೆ ಎಂದರು.

ಸಮ್ಮಿಶ್ರ ಸರ್ಕಾರ ಇಲ್ಲಿಯ ತನಕ ಸರಿಯಾಗಿ‌ ಟೇಕಾಫ್ ಆಗಿರಲಿಲ್ಲ. ಈಗ ಅದು ಸರಿಹೋಗುತ್ತಿದೆ. ಮನಸ್ತಾಪಗಳು, ಭಿನ್ನಾಭಿಪ್ರಾಯಗಳು ಶಮನವಾಗುತ್ತಿವೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಮ್ಮ ಪಕ್ಷ ಬೇಷರತ್ ಬೆಂಬಲ‌ ನೀಡಿದೆ ಅಂದರೆ ಅದರ ಅರ್ಥ ಪೂರ್ಣಾವಧಿಗೆ ಅಂತ ಅರ್ಥ. ಕುಮಾರಸ್ವಾಮಿಯವರು ಯಾವ ಉದ್ದೇಶದಿಂದ ಒಂದು ವರ್ಷ ಅಂತಾ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಮುಖಂಡರು ಅದರ ಬಗ್ಗೆ ಚರ್ಚಿಸುತ್ತಾರೆ ಎಂದು ಜಯಚಂದ್ರ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿ‌ಎಸ್‌-ಕಾಂಗ್ರೆಸ್ ಮೈತ್ರಿಯಾಗಿ ಎದುರಿಸುತ್ತವೆಯಾ ಎಂಬುದರ ಬಗ್ಗೆ ನಾನೇನೂ ಹೇಳಲಾರೆ. ಹೈಕಮಾಂಡ್ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

T.B.Jayachandra KPCC ಹೈಕಮಾಂಡ್ ಭಿನ್ನಾಭಿಪ್ರಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ