‘ಫುಡ್ ಪಾರ್ಕ್ ನಲ್ಲಿ ಮೋದಿ ರಾಜ್ಯದವರ ರಿಯಲ್ ಎಸ್ಟೇಟ್ ವ್ಯವಹಾರ’ - ಸಚಿವ ಶ್ರೀನಿವಾಸ್

minister S.R. srinivas serious allegation on tumkur food park

15-06-2018

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷಗಳ ಹಿಂದೆ ಉದ್ಘಾಟಿಸಿದ ತುಮಕೂರಿನ ಮೆಗಾ ಫುಡ್ ಪಾರ್ಕ್ ತಮ್ಮ ತವರು ರಾಜ್ಯ ಗುಜರಾತ್‍ನ ಉದ್ಯಮಿಗಳ ರಿಯಲ್ ಎಸ್ಟೇಟ್ ವ್ಯವಹಾರದ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಫುಡ್ ಪಾರ್ಕ್ ಆಗಿ ಪತಿವರ್ತನೆಯಾಗಲಿದೆ ಎಂದು ಮೋದಿ ಹೇಳಿದ್ದರು. ಆವರ ಆಕರ್ಷಕ ಮತ್ತು ಬಣ್ಣದ ಭಾಷಣ ಕೇಳಿದ ಜನರಿಗೆ ಇಲ್ಲಿಂದ ಹಣ್ಣು, ತರಕಾರಿ, ಸಂಸ್ಕರಿಸಿದ ಪದಾರ್ಥಗಳು ಯಥೇಚ್ಛವಾಗಿ ಜಗತ್ತಿನ ಮೂಲೆ ಮೂಲೆಗಳಿಗೆ ತಲುಪಲಿದೆ ಎನ್ನುವ ಸಂಭ್ರದಲ್ಲಿದ್ದರು. ಆದರೆ ಈ ಫುಡ್ ಪಾರ್ಕ್ ಸ್ಥಿತಿ ನೋಡಿದರೆ ಶೋಚನೀಯವಾಗಿದೆ ಎಂದರು.

ಈ ಫುಡ್ ಪಾರ್ಕ್‍ನಲ್ಲಿ ಮೋದಿ ಅವರ ರಾಜ್ಯದವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಫುಡ್ ಪಾರ್ಕ್ ಉದ್ದೇಶಕ್ಕೆ ನೀಡಿದ ಭೂಮಿ, ಸದ್ಬಳಕೆಯಾಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಣ್ಣ ಕೈಗಾರಿಕೆಗಳಿಗೆ ಮೀಸಲಿಟ್ಟ ಜಾಗವನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿದ ಪ್ರಕರಣಗಳು ಸಾಕಷ್ಟಿಗೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅಧಿಕಾರಿಗಳ ಸಹಭಾಗಿತ್ವವಿಲ್ಲದೇ ಇಂತಹ ದಂಧೆ ನಡೆಸಲು ಸಾಧ್ಯವಿಲ್ಲ. ಭೂಮಿ ಮಂಜೂರಾದ ನಂತರವೂ ಅದನ್ನು ಉದ್ದೇಶಕ್ಕೆ ಬಳಸಿಕೊಳ್ಳದ ವ್ಯಕ್ತಿಗಳಿಗೆ ನೊಟೀಸ್ ನೀಡಲಾಗುವುದು. ನಂತರವೂ ಬಳಕೆ ಮಾಡದಿದ್ದರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.

ಶಿರಾದಲ್ಲಿಯೂ ದುರುಪಯೋಗ ಪ್ರಕರಣ ನಡೆದಿದೆ. ಅಲ್ಲಿ 13 ವರ್ಷಗಳ ಹಿಂದೆ ಸಣ್ಣ ಕೈಗಾರಿಕೆಗಳಿಗಾಗಿ ಮೀಸಲಾದ 35 ಎಕರೆ ಪೈಕಿ 29 ಎಕರೆ ಪ್ರದೇಶವನ್ನು ಮುಂಬೈನ ಕೈಗಾರಿಕೋದ್ಯಮಿ ಒಬ್ಬರಿಗೆ ಷರತ್ತು ಉಲ್ಲಂಘಿಸಿ ಮಂಜೂರು ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕೆಐಡಿಬಿ 1700 ಎಕರೆ ಜಮೀನನ್ನು ರೈತರಿಂದ ಭೂ ಸ್ವಾಧೀನ ಮಾಡಿಕೊಂಡಿದೆ. ಆದರೆ ಪರಿಹಾರ ನೀಡಿಲ್ಲ ಎಂದರು.

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಯುವಪೀಳಿಗೆಗೆ ಉದ್ಯೋಗ ಒದಗಿಸಿಕೊಡಲು ಇಲಾಖೆಯಲ್ಲಿ ಪ್ರತ್ಯೇಕ ನಿರ್ದೇಶನಾಲಯ ತೆರೆಯಲಾಗುವುದು. ನಿರ್ದೇಶನಾಲಯದ ಅಗತ್ಯ ಬಹಳವಾಗಿದ್ದು, ಈ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆಮಾಡಿ, ಸಾಧ್ಯವಾದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕೈಗಾರಿಕಾ ಉದ್ದೇಶಗಳಿಗಾಗಿ ವಶಪಡಿಸಿಕೊಳ್ಳುವ ಭೂಮಿಯಲ್ಲಿ ಶೇಕಡ 20ರಷ್ಟು ಭೂಮಿಯನ್ನು ಕಡ್ಡಾಯವಾಗಿ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಗಮನಹರಿಸುವುದಾಗಿ ಅವರು ಹೇಳಿದರು.

ರಾಜ್ಯದ ಯುವ ಜನಾಂಗಕ್ಕೆ ಉದ್ಯೋಗ ಒದಗಿಸಿಕೊಡಲು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೈಗಾರಿಕಾ ಶೆಡ್‍ಗಳನ್ನು ನಿರ್ಮಾಣ ಮಾಡಲಾಗುವುದು. ಬೇಡಿಕೆ ಕುರಿತಂತೆ ಸಮೀಕ್ಷೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಶ್ರೀನಿವಾಸ್ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ