ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಆರಂಭ

15-06-2018
ಬೆಂಗಳೂರು: ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗುಡ್ಡು ಕುಸಿದು ಮೂರ್ನಾಲ್ಕು ದಿನಗಳಿಂದ ಬಂದ್ ಆಗಿದ್ದ ಬೆಂಗಳೂರು-ಚಿಕ್ಕಮಗಳೂರು ಸಂಪರ್ಕದ ಚಾರ್ಮಾಡಿ ಘಾಟ್ನ ರಸ್ತೆ ಸಂಚಾರ ಇಂದು ಆರಂಭಗೊಂಡಿದೆ. ಚಾರ್ಮಾಡಿ ಘಾಟ್ನ ರಸ್ತೆ ಸಂಚಾರ ಆರಂಭದಿಂದ ಮೂರ್ನಾಲ್ಕು ದಿನಗಳಿಂದ ರಸ್ತೆ ಸಂಪರ್ಕವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ವಾಹನ ಸವಾರರು, ಸಾರ್ವಜನಿಕರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಾರ್ಮುಡಿಘಾಟ್ನಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳು ಹಾಗೂ ಕುಸಿದು ಬಿದ್ದ ರಸ್ತೆಯನ್ನು ಸರಿಪಡಿಸುವಲ್ಲಿ ರಕ್ಷಣಾ ಪಡೆ ಹಗಲಿರುಳು ಶ್ರಮಿಸಿ ವಾಹನ ಸಂಚಾರಕ್ಕೆ ಸುಗಮಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆ ಮುಚ್ಚಿದ್ದರಿಂದ ಜನರು ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಖುದ್ದು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ಸಾಥ್ ನೀಡಿದ್ದರು. ಇದರಿಂದಾಗಿ ಲಘು ವಾಹನ ಸಂಚಾರ ಮತ್ತೆ ಆರಂಭವಾಗಿದೆ.
ಕಬಿನಿ ಭರ್ತಿ: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಕಬಿನಿ ಜಲಾಶಯ ತುಂಬಿದ್ದು, ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ 4 ಗೇಟ್ಗಳನ್ನು ತೆರೆದು ನೀರು ಹೊರಬಿಡಲಾಗಿದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಗೇಟ್ ತೆರೆದು ನೀರು ಹೊರ ಬಿಟ್ಟಿರುವುದರಿಂದ ನದಿಪಾತ್ರದ ಹಳ್ಳಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಅಕ್ಕಪಕ್ಕದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನೆಯಾಗುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಈ ವರ್ಷ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ಬಹುತೇಕ ಜಲಾಶಯಗಳು ಆರಂಭದಲ್ಲೇ ಭರ್ತಿಯಾಗುವ ಹಂತ ತಲುಪಿವೆ. ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2284 ಅಡಿಯಷ್ಟಿದ್ದು, ಬಹುತೇಕ ಜಲಾಶಯ ಭರ್ತಿಯಾಗಿದೆ.
ಹುಣಸೂರು ತಾಲ್ಲೂಕಿನಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದೆ. ಹನಗೋಡು ಗ್ರಾಮದಲ್ಲಿ ಸೇತುವೆಯೊಂದು ಮುಳುಗಡೆಯಾಗಿದೆ. ಹನಗೋಡಿನಿಂದ ಚಿಕ್ಕಹೆಜ್ಜೂರು, ಕೊಳವಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ.
ಒಂದು ಕಮೆಂಟನ್ನು ಹಾಕಿ