'ನನ್ನ ಜೊತೆ ಫೋಟೊ ತೆಗೆಸಿಕೊಂಡವರೆಲ್ಲ ಶ್ರೀರಾಮಸೇನೆ ಕಾರ್ಯಕರ್ತರಲ್ಲ’



15-06-2018

ಬೆಂಗಳೂರು: ನಮ್ಮ ಹೋರಾಟ ಶಾರೀರಿಕ ಸಂಘರ್ಷವಲ್ಲದೆ ವೈಚಾರಿಕ ಸಂಘರ್ಷವಷ್ಟೇ ಆಗಿದ್ದು ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಲ್ಲಿ ನಮ್ಮ ಸಂಘಟನೆಯ ಕೈವಾಡವಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನವೀನ್, ಪುರುಷೋತ್ತಮ್ ಸೇರಿದಂತೆ ಯಾರೂ ಸಹ ಶ್ರೀರಾಮ ಸೇನೆಯ ಕಾರ್ಯಕರ್ತರಲ್ಲ. ನವೀನ್ ಮದ್ದೂರಿನವರಾಗಿದ್ದು, ಅಲ್ಲಿ ಶ್ರೀರಾಮಸೇನೆಯ ಸಂಘಟನೆಯೇ ಇಲ್ಲ ಎಂದು ಹೇಳಿದರು.

ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವಾಗ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರನ್ನು ಕುಶಲ ವಿಚಾರಿಸಿ ಮಾತನಾಡಿಕೊಂಡು ಹೋಗುವುದು ನನ್ನ ಅಭ್ಯಾಸ. ಆ ವೇಳೆ ಸಾಕಷ್ಟು ಮಂದಿ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳುತ್ತಾರೆ. ಹಾಗಂತ ನನ್ನ ಜೊತೆ ಫೋಟೊ ತೆಗಸಿಕೊಂಡವರೆಲ್ಲ ಶ್ರೀರಾಮಸೇನೆಯ ಕಾರ್ಯಕರ್ತರಲ್ಲ ಎಂದು ಹೇಳಿದರು.

ಅಮಾನವೀಯ ಹತ್ಯೆಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿದ ಅವರು, ಮುಸ್ಲಿಂ, ಕ್ರಿಶ್ಚಿಯನ್,ಮಾವೊವಾದಿ, ನಕ್ಸಲೀಯರಂತಹ ಉಗ್ರ ಸಂಘಟನೆಗಳಲ್ಲಿ ಪೈಶಾಚಿಕ ಹತ್ಯೆಗಳನ್ನು ಮಾಡಲು ತರಬೇತಿ ನೀಡಲಾಗುತ್ತದೆ. ಅಂತಹ ಹೃದಯಹೀನ ಕಾರ್ಯಗಳನ್ನು ಹಿಂದೂ ಸಂಘಟನೆಗಳು ಮಾಡಲು ಬಯಸುವುದೂ ಇಲ್ಲ ಎಂದು ಹೇಳಿದರು.

ಹಿಂದೂ ಧರ್ಮದ ವಿರೋಧಿಯಾಗಿದ್ದ ಗೌರಿ ಅವರನ್ನು ವೈಚಾರಿಕ ಸಂಘರ್ಷದಿಂದ ಎದುರುಸುತ್ತಿದ್ದೇವು ಆದರೆ ಅವರನ್ನು ಹತ್ಯೆ ಮಾಡುವಷ್ಟು ಕೀಳುಮಟ್ಟಕ್ಕೆ ಹಿಂದೂ ಸಂಘಟನೆಗಳು ಇಳಿಯುವುದಿಲ್ಲ ಈಗಾಗಲೇ ನಾವು ಪತ್ರಕರ್ತೆ ಗೌರಿ ಹತ್ಯೆಯನ್ನು ಖಂಡಿಸಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಸೇರಿದಂತೆ ಎಲ್ಲ ಹಿಂದೂ ಪರ ಸಂಘಟನೆಗಳು ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ದೇಶದಲ್ಲಿ 18 ಕೋಟಿ ಮುಸ್ಲಿಮರಿದ್ದಾರೆ. 5 ಕೋಟಿ ಕ್ರಿಶ್ಚಿಯನ್ ಇದ್ದಾರೆ, ಯಾವುದೇ ಒಂದು ಧರ್ಮವನ್ನು ಬಿಟ್ಟು ಭಾರತದ ನಕಾಶೆಯನ್ನು ನೆನಪಿಸಿಕೊಳ್ಳುವುದೂ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ