ಪರಿಷತ್ ಚುನಾವಣೆ: ಬಿಜೆಪಿ-3,ಜೆಡಿಎಸ್-2,ಕಾಂಗ್ರೆಸ್-1 ಗೆಲುವು

vidhan parishad Elections: BJP-3, JDS-2, Congress-1

13-06-2018 412

ಬೆಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‍ನ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು,  ಬಿಜೆಪಿ ಮೂರು, ಜೆಡಿಎಸ್ ಎರಡು, ಕಾಂಗ್ರೆಸ್ ಒಂದು ಸ್ಥಾನ ಗಳಿಸಿದೆ.

ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯ ಅವರ ಪುತ್ರ ಎಸ್.ಎಲ್.ಧರ್ಮೇಗೌಡ ಈಗಾಗಲೇ ಮೇಲ್ಮನೆ ಸದಸ್ಯರಾಗಿದ್ದು, ಇದೀಗ ಅವರ ಸಹೋದರ ಎಸ್.ಎಲ್.ಭೋಜೇಗೌಡ ಮೇಲ್ಮನೆಗೆ ಚುನಾಯಿತರಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಇದೀಗ ಸಹೋದರರ ಸವಾಲ್ ಮಾರ್ದನಿಸಲಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಪದವೀದರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ.ದೇವೇಗೌಡ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ವಿರುದ್ದ ಜಯಗಳಿಸಿದ್ದಾರೆ.

ನೈರುತ್ಯ ಪದವೀದರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್ ವಿರುದ್ಧ ಜಯಗಳಿಸಿದ್ದರೆ, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ, ಜೆಡಿಎಸ್‍ನ ರಮೇಶ್ ಬಾಬು ವಿರುದ್ಧ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇ ಗೌಡ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಬೋಜೆಗೌಡ ಜಯ ಸಾಧಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಧರ್ಮೇಗೌಡ ಜೆಡಿಎಸ್ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ.

ಫಲಿತಾಂಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪಕ್ಷ ಪರಿಷತ್ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಜಯಗಳಿಸಿದ್ದು, ಮತದಾರರು ಪಕ್ಷದ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ, ಜಯನಗರ ವಿಧಾನಸಭಾ ಮತ್ತು ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

vidhan parishad election ಅವಿರೋಧ ಈಶಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ