ಪರಶುರಾಮನನ್ನು ತೀವ್ರ ವಿಚಾರಣೆಗೊಳಪಡಿಸಿದ ಎಸ್ಐಟಿ

Gauri Murder:

13-06-2018 275

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಶ್ರೀರಾಮಸೇನೆ ಕಾರ್ಯಕರ್ತ ಪರಶುರಾಮ ಅಶೋಕ ವಾಘ್ಮೋರೆಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಗುಂಡು ಹಾರಿಸಿದ ಹಂತಕನ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ ಅಶೋಕ ವಾಘ್ಮೋರೆ(26)ಯನ್ನು ಮಂಗಳವಾರ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿ ಜೂನ್ 24ರವರೆಗೆ ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಕೃತ್ಯದ ಸಿಸಿ ಟಿವಿ ಕ್ಯಾಮಾರಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಗೌರಿ ಲಂಕೇಶ್ ಅವರ ಮನೆ ಬಳಿ ಕರೆದೊಯ್ದು ಕೃತ್ಯದ ಅಣಕು ಪರಾಮರ್ಶೆ ನಡೆಸಿದ್ದಾರೆ.

ಬಂಧಿತ ಪರಶುರಾಮ್ 5 ಅಡಿ ಒಂದು ಇಂಚು ಎತ್ತರ ಹೊಂದಿದ್ದು, 75-80 ಕೆಜಿ ತೂಕವನ್ನು ಹೊಂದಿದ್ದಾನೆ. ಗೌರಿ ಹತ್ಯೆಯ ನಂತರ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಎಸ್‍ಐಟಿ ನಾಲ್ವರು ಆರೋಪಿಗಳ ರೇಖಾಚಿತ್ರವನ್ನು ಬಿಡಿಸಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದ ವಿಧಿ ವಿಜ್ಞಾನ ಪ್ರಯೋಗಾಲಯ 5.1 ಅಡಿ ಅಥವಾ 5.2 ಅಡಿ ಎತ್ತರ ಹಾಗೂ 70 ಕೆಜಿಯಷ್ಟು ತೂಕ ಇರುವ ವ್ಯಕ್ತಿಯಿಂದ ಶೂಟ್ ಆಗಿದೆ ಎಂದು ಹೇಳಿತ್ತು.

ರಾಜರಾಜೇಶ್ವರಿನಗರದ ಗೌರಿ ಮನೆಯ ಬಳಿ ಪರಾಮರ್ಶೆಯ ನಂತರ ರಹಸ್ಯ ಸ್ಥಳದಲ್ಲಿ ಪರಶುರಾಮನ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕತೊಡಗಿದ್ದಾರೆ.

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪರಶುರಾಮನ ಪಾತ್ರವೇನು ಎಂಬುದರ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದ್ದು ಇನ್ನೂ ನಮಗೆ ಗೌರಿ ಅವರ ಮೇಲೆ ಗುಂಡು ಹಾರಿಸಿದ ಹಂತಕನ ಖಚಿತ ಸುಳಿವು ಲಭ್ಯವಾಗಿಲ್ಲ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆ ಸಂಬಂಧ ಈಗಾಗಲೇ ಬಂಧಿಸಿರುವ ಶಿಕಾರಿಪುರದ ಕಪ್ಪನಹಳ್ಳಿಯ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‍ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಪರಶುರಾಮ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎನ್ನುತ್ತಾರೆ.

ಸ್ಥಳೀಯವಾಗಿ ಕೋಮು ಗಲಭೆ ಸೃಷ್ಟಿಸಿ, ತಾನೇ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ. ಪಿಸ್ತೂಲ್ ಬಳಸುವುದರಲ್ಲಿ ಪರಶುರಾಮ ಪರಿಣಿತ ಎಂದು ಆರೋಪಿಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದರು,ಕಲಬುರ್ಗಿ ಜಿಲ್ಲೆಯ ಸೊನ್ನ ಹಾಗೂ ವಿಜಯಪುರ ಜಿಲ್ಲೆಯ ದೇವನಗಾಂವ್ ಗಡಿಯಲ್ಲಿ ಪಿಸ್ತೂಲ್‍ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಈ ಪ್ರದೇಶವು ಸಿಂದಗಿಗೆ ಸಮೀಪದಲ್ಲಿರುವುದರಿಂದ ಅಲ್ಲಿಂದ ಪಿಸ್ತೂಲ್‍ಗಳನ್ನು ಪರಶುರಾಮ್ ಖರೀದಿಸಿದ್ದ ಮಾಹಿತಿ ಇದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ  ಎಂದು ಹೇಳಿದರು.

ಗೌರಿ ಅವರಿಗೆ ಪರಶುರಾಮನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನುವುದು ಖಚಿತವಾಗಿಲ್ಲ ಪ್ರಕರಣ ಸಂಬಂಧ ಇನ್ನೊಬ್ಬ ಸಿಂದಗಿಯ ಸುನೀಲ್ ಮಡಿವಾಳಪ್ಪ ಅಗಸರ (25) ಎಂಬಾತನನ್ನು ವಶಕ್ಕೆ ಪಡೆದು ಆತನಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಬಂಧಿತ ಸುನೀಲ್ ಶ್ರೀರಾಮಸೇನೆ ಕಾರ್ಯಕರ್ತನಾಗಿದ್ದಲ್ಲದೇ ಆರೋಪಿ ಪರಶುರಾಮನ ಸ್ನೇಹಿತನಾಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ.

ಪರಶುರಾಂ ಜೊತೆಗೆ ವಿಚಾರಣೆ ನಡೆಸಲು ಸುನೀಲ್‍ನನ್ನು ನಗರಕ್ಕೆ ಕರೆತರಲಾಗಿದೆ.  ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದರ ತೀವ್ರ ವಿಚಾರಣೆಗೊಳಪಡಿಸಲಾಗುತ್ತದೆ ಪ್ರಕರಣ ಸಂಬಂಧ ಮೊದಲಿಗೆ ಬಂಧಿಸಲಾಗಿದ್ದ ಮದ್ದೂರಿನ ಕೆ.ಟಿ.ನವೀನ್‍ಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಳಿದ ಐವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿಚಾರಣೆಯಿಂದ ಗೌರಿ ಅವರಿಗೆ ಗುಂಡು ಹಾರಿಸಿ ಬೈಕ್‍ನಲ್ಲಿ ಪರಾರಿಯಾದ ಹಂತಕರನ್ನು ಪತ್ತೆ ಹಚ್ಚುವುದು ಸಾಧ್ಯವಾಗಲಿದೆ ಈಗಾಗಲೇ ಎಸ್‍ಐಟಿ ಅಧಿಕಾರಿಗಳ ಒಂದು ತಂಡ ಮಹಾರಾಷ್ಟ್ರಕ್ಕೆ ತೆರಳಿ ಗುಂಡು ಹಾರಿಸಿದವನಿಗಾಗಿ ಶೋಧ ನಡೆಸಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

SIT investigation ಪತ್ರಕರ್ತೆ ಪರಶುರಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ