ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಬೃಹತ್ ಪ್ರತಿಭಟನೆ !

Kannada News

25-05-2017

ಬೆಂಗಳೂರು:- ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೇರಿ ಸಾವಿರಾರು ರೈತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ರೈತರು ಆನಂದ್ ರಾವ್ ವೃತ್ತದ ಬಳಿ ಸೇರಿ ಅಲ್ಲಿಂದ ಮುಖ್ಯಮಂತ್ರಿಗಳ  ಮನೆ ಮುತ್ತಿಗೆ ಹಾಕಲು ನಡೆಸಿದ ಮೆರವಣಿಗೆಯನ್ನು ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಪೊಲೀಸರು ತಡೆದರು. ಅಲ್ಲೇ ಸಮಾವೇಶಗೊಂಡು ರಸ್ತೆಯಲ್ಲಿ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆಯ ನೇತೃತ್ವ ವಹಿಸಿದ್ದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ರೈತರು ಗೌರವಯುತವಾಗಿ ಜೀವಿಸಲು ಸರ್ಕಾರಗಳು ಅನುವು ಮಾಡಿಕೊಡಬೇಕು. ರೈತರ ಸಾಲ ಮನ್ನಾ ಮಾಡದಿದ್ದರೆ ಯಾವುದೇ ಶಾಸಕರನ್ನು ಮತ ಕೇಳಲು ಗ್ರಾಮಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ೩೨ ಸಾವಿರ ಕೋಟಿ ಬೆಳೆ ನಷ್ಟ ಉಂಟಾಗಿದೆ. ಆದರೆ, ಕೇಂದ್ರ ಸರ್ಕಾರ ಕೇವಲ ೨ ಸಾವಿರ ಕೋಟಿ ರೂ. ಮಾತ್ರ ಪರಿಹಾರ ಒದಗಿಸಿದೆ. ಉಳಿದ ೩೦ ಸಾವಿರ ಕೋಟಿ ರೂ. ಬೆಳೆ ಹಾನಿಗೆ ಯಾರು ಹೊಣೆ? ಇದನ್ನು ತುಂಬಿಕೊಡುವವರು ಯಾರು ಎಂದು ಪ್ರಶ್ನಿಸಿದರು. ಸರ್ಕಾರದಿಂದ ಬರುವ ಬೆಳೆ ಪರಿಹಾರ, ವೃದ್ಧಾಪ್ಯ ವೇತನ, ಹಾಲಿನ ಸಹಾಯ ಧನ, ಬೆಳೆ ವಿಮೆ, ವಿಧವಾ ವೇತನ ಇತ್ಯಾದಿ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ರಾಜ್ಯವನ್ನು ಶಾಶ್ವತ ಬರಗಾಲದಿಂದ ಹೊರ ತರಲು ವಿಶೇಷ ಆವೃತ್ತ ನಿಧಿಯನ್ನು ಸೃಷ್ಟಿಸಬೇಕು, ಬರಗಾಲದ ನಿಧಿಯನ್ನು ರಾಜ್ಯದ ಮಳೆ ಆಧಾರಿತ ಖುಷ್ಕಿ ಪ್ರದೇಶದ ರೈತರನ್ನು ರಕ್ಷಣೆ ಮಾಡಬೇಕು, ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲಗಳು ಮರುಪಾವತಿ ಮಾಡಲಾಗದ ಪರಿಸ್ಥಿತಿಗೆ ಸಿಕ್ಕಿವೆ, ಸಾಲ ವಸೂಲಿ ಕ್ರಮಗಳಿಂದ ಗ್ರಾಮೀಣ ಮಹಿಳೆಯ ಬದುಕಿನ ನೆಮ್ಮದಿ ನಾಶವಾಗಿ ಮಹಿಳೆಯರು ಆತಂಕ ಸ್ಥಿತಿಯಲ್ಲಿದ್ದಾರೆ. ಕೂಡಲೇ ಬಲವಂತದ ಸಾಲ ವಸೂಲಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಆಗಮಿಸಿ ರೈತ ಮುಖಂಡರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಟಿ.ಬಿ. ಜಯಚಂದ್ರ, ರೈತರ ಸಾಲ ಮನ್ನಾ ಸೇರಿದಂತೆ ಎಲ್ಲಾ ಬೇಡಿಕೆಗಳ ಬಗ್ಗೆ ಶೀಘ್ರವೇ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಬಳಿಕ ರೈತ ಮುಖಂಡರ ಸಭೆ ಕರೆದು ಎಲ್ಲಾ ಬೇಡಿಕೆಗಳ ಬಗ್ಗೆಯೂ ಚರ್ಚಿಸಲಾಗುವುದು ಅಲ್ಲದೇ ರೈತ ಹೋರಾಟಗಾರರ ಮೇಲಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಇದೇ ವೇಳೆ ಭರವಸೆ ನೀಡಿದರು. ಸಚಿವ ರಮೇಶ್ ಕುಮಾರ್ ಮಾತನಾಡಿ, ಸಾಲ ಮನ್ನಾ ಎಂಬುದು ಇಂದು ರಾಜಕಾರಣಿಗಳಿಗೆ ಒಂದು ಸೂಚ್ಯ ವಿಷಯವಾಗಿದೆ.ನಮ್ಮ ಸಹಕಾರಿ ಬ್ಯಾಂಕುಗಳು ಕೇವಲ ಸಣ್ಣ ಮತ್ತು ಮಧ್ಯಮಾವಧಿ ಸಾಲ ಮಾತ್ರ ನೀಡುತ್ತಿದೆ. ಇದರ ಪ್ರಯೋಜನೆ ಪಡೆದ ರೈತರು ಅತ್ಯಲ್ಪ ಮಾತ್ರ. ಆದರೆ, ಹೆಚ್ಚಿನ ಜನರು ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ದೂರಿದರು.
ನಮ್ಮಲ್ಲಿ ಕೃಷಿ ನೀತಿ, ಯೂರಿಯಾ ನೀತಿ, ಗೊಬ್ಬರ ನೀತಿ ಇಲ್ಲದಿರುವುದೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಬಗ್ಗೆ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ರೈತರ ಪರವಾಗಿ ಮುಖ್ಯಮಂತ್ರಿಯ ಮುಂದೆ ಬಲವಾದ ವಕಾಲತ್ತು ವಹಿಸುತ್ತೇನೆ. ನನಗೆ ರಾಜಕೀಯ ಮುಖ್ಯವಲ್ಲ, ಯಾವತ್ತೂ ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ