‘ಇನ್ಮುಂದೆ ಕರ್ನಾಟಕ ಗೃಹ ಮಂಡಳಿ ಫ್ಲ್ಯಾಟ್ ಗಳನ್ನು ಪಡೆಯುವುದು ಸುಲಭ’12-06-2018

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಫ್ಲ್ಯಾಟ್ ಗಳನ್ನು ಸಾರ್ವಜನಿಕರು ಇನ್ನು ಸುಲಭವಾಗಿ ಪಡೆಯಬಹುದು. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಪ್ರತ್ಯೇಕ ಆಯುಕ್ತಾಲಯ ಸ್ಥಾಪಿಸಿ, ಆಯುಕ್ತರನ್ನು ನೇಮಕ ಮಾಡಲು ಸಹ ನಿರ್ಧರಿಸಿದೆ.

 ಫ್ಲ್ಯಾಟ್ ಗಳನ್ನು ಪಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿದ್ದು, ಠೇವಣಿ ಮೊತ್ತವನ್ನು ಕಡಿತಗೊಳಿಸಿದೆ. ಇದೇ ರೀತಿ ಅದು ಆದಾಯ ಮಿತಿಯ ನಿರ್ಬಂಧವನ್ನೂ ತೆಗೆದು ಹಾಕಿದೆ. ಒಟ್ಟಾರೆ ಯಾರಾದರೂ 50 ಸಾವಿರ ಠೇವಣಿ ಇಟ್ಟು ಸ್ಥಳದಲ್ಲೇ ಗೃಹ ಮಂಡಳಿಯ ಫ್ಲ್ಯಾಟ್ ಗಳನ್ನು ಖರೀದಿಸಬಹುದಾಗಿದೆ.

ಈ ಸಂಬಂಧ ವಸತಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಇಂದು ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಮಂಡಳಿ ವತಿಯಿಂದ ನಿರ್ಮಿಸಿರುವ  ಫ್ಲ್ಯಾಟ್ ಗಳನ್ನು ಖರೀದಿಸುವವರೇ ಇಲ್ಲ ಎಂಬ ಅಪವಾದಗಳಿವೆ. ಇದನ್ನು ತೆಗೆದು ಹಾಕಬೇಕು. ಸುಲಭವಾಗಿ ಸಾರ್ವಜನಿಕರಿಗೆ ಕೆಎಚ್‍ಕೆ  ಫ್ಲ್ಯಾಟ್ ಗಳು ಸಿಗುವಂತಾಗಬೇಕು. ಹಾಗಾಗಿ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ ಎಂದು ಹೇಳಿದರು.

ಐದು ವರ್ಷ ಬೆಂಗಳೂರಿನಲ್ಲಿ ವಾಸವಿರಬೇಕು, 90 ಸಾವಿರ ಠೇವಣಿ ಇಡಬೇಕು, ಆದಾಯ ಮಿತಿಗೊಳಪಟ್ಟಿರಬೇಕು ಎಂಬಿತ್ಯಾದಿ ನಿಬಂಧನೆಗಳನ್ನೆಲ್ಲ ಸಡಿಲಗೊಳಿಸಲಾಗಿದೆ ಎಂದು ಅವರು ಹೇಳಿದರು. ರಾಜೀವ್‍ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾದಾಗ ಅವರು ಖಾಸಗಿಯವರ ಮೊರೆ ಹೋಗುತ್ತಾರೆ. ಇದರಿಂದ ತೊಂದರೆಗೆ ಸಿಲುಕುತ್ತಾರೆ.

ಅದನ್ನು ತಪ್ಪಿಸಲು ಸರ್ಕಾರ ಅವರಿಗೆ ಮಂಜೂರಾತಿ ಪತ್ರ ನೀಡಿದ ತಕ್ಷಣ ಆ ಮಂಜೂರಾತಿ ಪತ್ರದ ಆಧಾರದ ಮೇಲೆ ಸ್ಥಳೀಯ ಸಹಕಾರಿ ಬ್ಯಾಂಕ್ ಗಳು ಹಾಗೂ ಇನ್ನಿತರ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದಾಗಿದೆ.

ಸರ್ಕಾರ ನೀಡುವ ಹಂತ ಹಂತದ ಅನುದಾನದಲ್ಲಿ ಇದನ್ನು ತೀರಿಸಬಹುದಾಗಿದೆ ಎಂದು ಹೇಳಿದರು. ಗೃಹ ಇಲಾಖೆಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಲು ಸಲ್ಲಿಸುತ್ತಿದ್ದ ಅರ್ಜಿಗಳನ್ನು ಈಗ ಆನ್‍ಲೈನ್ ಮೂಲಕ ಪಡೆಯಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಬೆಂಗಳೂರು ಗೃಹ ಮಂಡಳಿ ವತಿಯಿಂದ ಈ ವರೆಗೂ ಜಿ+3  ಫ್ಲ್ಯಾಟ್ ಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಜಿ+14 ಫ್ಲ್ಯಾಟ್ ಗಳ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದರಿಂದ ಹೆಚ್ಚಿನ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

U. T. Khader Housing board ಅನುಷ್ಠಾನ ಫ್ಲ್ಯಾಟ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ