ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

siddaramaiah at varuna constituency

12-06-2018

ಮೈಸೂರು: ವರುಣಾ ಜನತೆಯ ಎಲ್ಲಾ ಮತದಾರರಿಗೆ ಹೃದಯ ಪೂರ್ವಕವಾಗಿ ಕೃತಘ್ನತೆಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ ಅವರು, ‘ಬಹಳ ದೊಡ್ಡ ಮಟ್ಟದ ಮತ ನೀಡುವ ಮೂಲಕ ಗೆಲ್ಲಿಸಿದ್ದೀರಿ. ವರುಣಾದಲ್ಲಿ ನಾನು ಮುವತ್ತು ಸಾವಿರ ಮತಗಳನ್ನು ತೆಗೆದುಕೊಂಡಿದ್ದೆ. ಆದರೆ, ಯತೀಂದ್ರರವರಿಗೆ ಐವತ್ತೆಂಟು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದೀರಿ. ನಾನು ವರುಣ ಜನತೆಯನ್ನು ಎಂದಿಗೂ ಮರೆಯುವಂತಿಲ್ಲ’ ಎಂದರು.

‘ನಾನು ಮತ್ತು ಯತೀಂದ್ರ ವರುಣಾ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ನಾವು ನಿರೀಕ್ಷೆ ‌ಇಟ್ಟಷ್ಟು ಸ್ಥಾನಗಳು ಸಿಗಲಿಲ್ಲ. ನಾವು ಜನತೆಗೆ ಕೊಟ್ಟಂತಹ ಭರವಸೆಗಳನ್ನು ಈಡೇರಿಸಿದ್ದೆವು. ಜನಪರ ಕೆಲಸಗಳನ್ನು ಮಾಡಿದ್ದೆವು. ಯಾವ ಸರಕಾರವು ಮಾಡದ ಕೆಲಸಗಳನ್ನು ನಾವು ಮಾಡಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಪಣ ತೊಟ್ಟು ‘ಅನ್ನಭಾಗ್ಯ’ ನೀಡಿದ್ದೇವೆ. ಬಿಜೆಪಿ ಏನೇ ಹೇಳಬಹುದು ಆದರೆ ಅವರ ಕೈಯಲ್ಲಿ ಅನ್ನಭಾಗ್ಯ ಕೊಡಲಾಯಿತೆ? ನಾನು ಚಿಕ್ಕವನಾಗಿದ್ದಾಗ ಅನ್ನಕ್ಕೆ ಎಷ್ಟು ಕಷ್ಟ ಇತ್ತು ಎನ್ನುವುದನ್ನು ಕಣ್ಣಾರೆ ನೋಡಿದ್ದೇನೆ. ಅದಕ್ಕಾಗಿ ನಾನು ಮುಖ್ಯಮಂತ್ರಿಯಾಗಿ‌ ಅಧಿಕಾರ ಸ್ವೀಕರಿಸಿದಾಗಲೆ ತೀರ್ಮಾನಕ್ಕೆ ಬಂದೆ. ಕರ್ನಾಟಕದಲ್ಲಿ ಯಾರೂ ಹಸಿದು ಮಲಗಬಾರದು ಎಂದು ಅನ್ನಭಾಗ್ಯ ನೀಡಿದೆ. ಒಂದು ಕೋಟಿ ಎರಡು ಲಕ್ಷ ಮಕ್ಕಳಿಗೆ ಹಾಲು ಮೊಟ್ಟೆ, ಸೈಕಲ್, ‌ಬಾಲಕಿಯರಿಗೆ ಲ್ಯಾಪ್ ಟಾಪ್, ಇಂದಿರಾ ಕ್ಯಾಂಟೀನ್, ರೈತರ ಸಾಲಮನ್ನಾ, ಹೀಗೆ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೆವು, ಇದೆಲ್ಲವನ್ನ ಓಟಿಗಾಗಿ ಮಾಡಿಲ್ಲ ಕೇವಲ ಜನರ ಹಿತದೃಷ್ಟಿಯಿಂದ ಮಾಡಿದ್ದು’ ಎಂದರು.

‘ನರೇಂದ್ರ ಮೋದಿಯವರು ಯಾವಾಗಲೂ ‘ಭಾಯಿ ಔರ್ ಭಹನೋ’ ಅಂತ ಕೇವಲ ಭಾಷಣ ಬಿಗಿತಾರೆ, ಬಿಜೆಪಿ ನಡಿಗೆ ದಲಿತರ ಮನೆ ಕಡೆಗೆ ಅಂತ ಯಡಿಯೂರಪ್ಪ, ಶೋಭಾ ಕರಂದ್ಲಾಜೆಯವರು ಹೊಟೇಲ್ ನಿಂದ ತಿಂಡಿ ತರಿಸಿಕೊಂಡು ತಿಂದರಲ್ಲ’ ಎಂದು ವ್ಯಂಗ್ಯವಾಡಿದರು.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಬಿಜೆಪಿ, ಗಡ್ಡ ಬಿಟ್ಟಿರೊರು ಯಾರೂ ನಮ್ಮ ಬಳಿ ಬರಬಾರದು ಅಂತ ಬಿಜೆಪಿಯ ಯತ್ನಾಳ್  ಹೇಳಿದ್ದರು. ಹಾಗಾದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಗೆ ಸಾಧ್ಯ. ಮೋದಿ ಮಾತೆತ್ತಿದರೆ 'ಮನ್ ಕಿ ಬಾತ್' ಅಂತಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.

‘ಮಾನವಿಯತೆಯಲ್ಲಿ ನಂಬಿಕೆ ಇಟ್ಟು ಕೊಂಡಂತಹವರು ನಾವು. ಇಂತದ್ದೇ ಜಾತಿಯಲ್ಲಿ ಹುಟ್ಟಬೇಕು ಅಂತ ಅನ್ಕೊಂಡಿರ್ತಿವಾ? ಹಾಗೇನಾದರು ಅರ್ಜಿ ಹಾಕಲು ಅವಕಾಶ ಇದ್ದಿದ್ದರೆ, ಅಂತಹ ಜಾತಿಯಲ್ಲೇ ಹುಟ್ಟ ಬೇಕು ಎಂದು ಅರ್ಜಿ ಹಾಕಬಹುದಿತ್ತು ಎಂದು ಬಿಜೆಪಿಯನ್ನು ಕುಟುಕಿದರು.

‘ಸೋಲು ಗೆಲವು ಪ್ರಜಾಪ್ರಭುತ್ವದಲ್ಲಿ ಇದ್ದಿದ್ದೇ, ನಾನು ಸೋಲಿಗೆ ಯಾವತ್ತು ಹೆದರಲ್ಲ, ಆದರೆ ಇಷ್ಟೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ, ಜನ ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ಯಕ್ಷ ಪ್ರಶ್ನೆ ನನಗೆ ಕಾಡುತ್ತಿದೆ. ಆದರೆ, ನನಗೆ ತೃಪ್ತಿ ಇದೆ, ಜನಪರ ಕೆಲಸ ಮಾಡಿದ್ದೇನೆ, ಜನರ ತೀರ್ಪನ್ನು ನಾನು ಸ್ವೀಕರಿಸುತ್ತೇನೆ ಎಂದರು.

ರಾಜಕೀಯದಲ್ಲಿ ಅಂಬೇಡ್ಕರ್, ಇಂದಿರಾ ಗಾಂಧಿಯವರನ್ನೆ ಜನ ಸೋಲಿಸಿದ್ದರು. ನಾನೂ ನೋಡಿದ್ದೇನೆ ಒಳ್ಳೆಯವರಿಗೆ ಕಷ್ಟ ಬರೋದು. ಅದಕ್ಕೆ ಮತದಾರರ ತೀರ್ಪಗೆ ತಲೆ ಬಾಗುತ್ತೇನೆ. ಈ ರಾಜ್ಯದ ಜನ ನಮ್ಮ ಕುಟುಂಬವಿದ್ದಂತೆ, ಅದರಲ್ಲೂ ವರುಣಾದಲ್ಲಿ ಯತೀಂದ್ರ, ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದೀರಿ ನಿಮ್ಮ ಋಣವನ್ನು ತೀರಿಸುವುದು ನಮ್ಮ ಕರ್ತವ್ಯ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah dr yathindra ಹಸಿವು ಕ್ಯಾಂಟೀನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ