ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಸವಾರರೇ ಎಚ್ಚರ !

Kannada News

25-05-2017

ಬೆಂಗಳೂರು:- ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಸವಾರರೇ ಎಚ್ಚರ. ಏಕೆಂದರೆ ರಸ್ತೆ ಪಕ್ಕದಲ್ಲಿ ನಿಂತು ನಿಮ್ಮನ್ನು ಸೆಳೆದು ದೋಚುವ ಗ್ಯಾಂಗ್ ನವರಿದ್ದಾರೆ, ಅಂತಹ ಒಂದು ಗ್ಯಾಂಗ್‌ನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಮೈಲಸಂದ್ರ-ಬೇಗೂರು ಮುಖ್ಯ ರಸ್ತೆಯ ನಡುವೆ ಯುವತಿಯೊಬ್ಬಳು ನಿಂತಿರುತ್ತಾಳೆ. ನೈಸ್ ರಸ್ತೆ ಕಿರಿದಾಗಿದ್ದರಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿರುತ್ತವೆ. ಇದನ್ನೇ ಬಂಡವಾಳವನ್ನಾಗಿಸಿ ವಾಹನಗಳ ಲೈಟ್ ಬೆಳಕಿನಲ್ಲಿ ಮೈಮಾಟ ಪ್ರದರ್ಶಿಸಿಸುತ್ತಿರುವ ಯುವತಿಯೊಬ್ಬಳನ್ನು ಕಂಡು ನೀವೇನಾದರೂ ವಾಹನ ನಿಲ್ಲಿಸಿದರೆ ನಿಮ್ಮ ಬಳಿಯ ಬೆಲೆ ಬಾಳುವ ವಸ್ತುಗಳನ್ನು ದೋಚುವುದು ಗ್ಯಾರಂಟಿ. ಯುವತಿ ನಿಮ್ಮೊಂದಿಗೆ ಆ ಕೂಡಲೇ ವ್ಯವಹಾರ ಕುದುರಿಸಿ ಕತ್ತಲ ದಾರಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲದೇ ಕತ್ತಲಲ್ಲಿ ಕುಳಿತಿದ್ದ ಆಕೆಯ ಕಡೆಯ ಹುಡುಗರಿಂದ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕುತ್ತಾಳೆ. ಬಳಿಕ ಎಲ್ಲರೂ ಸೇರಿ ಬೆದರಿಸಿ ಹಣ ಲೂಟಿ ಮಾಡುತ್ತಾರೆ. ಘಟನೆಯ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಪೊಲೀಸರು ತಡರಾತ್ರಿ ದಾಳಿ ನಡೆಸಿ ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೋನಿಷಾ, ಮುತ್ತು, ಪುನೀತ್, ತುಳಸಿರಾಮ್, ಅರುಣ್ ಯಶುರಾಜ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ವಿಘ್ನೇಶ್, ಸ್ಟೀಫನ್, ಬಬ್ಲೂ, ಅಲೆಕ್ಸ್ ಹಾಗೂ ಅಮರ್ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ