ಮಳೆ ಹಾನಿ: ತಕ್ಷಣ ಪರಿಹಾರಕ್ಕೆ ಕಂದಾಯ ಸಚಿವ ಸೂಚನೆ

Rain damage: Revenue Minister instructed for immediate relief

11-06-2018

ಬೆಂಗಳೂರು: ಕಳೆದೊಂದು ತಿಂಗಳಿಂದ ಸುರಿದ ಧಾರಾಕಾರ ಮಳೆಯಿಂದ ನೂರಾರು ಮಂದಿ ಜೀವ ಕಳೆದುಕೊಂಡಿದ್ದು, ಜೀವ ಹಾನಿ, ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ವಿತರಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆಯಿಂದ 104ಮಂದಿ ಮೃತಪಟ್ಟಿದ್ದು, ಅವರ ಅವಲಂಬಿತರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು. ಗುಡುಗು ಮತ್ತು ಸಿಡಿಲಿಗೆ 94 ಹಾಗೂ ಹತ್ತು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತರ ಕುಟುಂಬಗಳಿಗೆ ಇಲಾಖೆಯಿಂದ 4ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1ಲಕ್ಷ ರೂ. ನೀಡಲಾಗುವುದು ಎಂದರು.

ಜೀವಹಾನಿ ಪ್ರಕರಣಗಳಿಗೆ ಒಟ್ಟು 4.16 ಕೋಟಿ, ಜಾನುವಾರು ಹಾನಿಗೆ ಒಟ್ಟು 1.60 ಕೋಟಿ, ಹಾಗೂ ಮನೆ ಕುಸಿತ ಪ್ರಕರಣಗಳಿಗೆ ಒಟ್ಟು 2.90 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗುವುದು. 2101 ಮನೆಗಳು ಭಾಗಶಃ ಹಾಗೂ 189 ಮನೆಗಳು ಸಂಪೂರ್ಣಗಳು ಕುಸಿದಿವೆ. ಜಾನುವಾರು ಹಾನಿ ಪ್ರಕರಣದಲ್ಲಿ ತಲಾ 25ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ದೇಶಪಾಂಡೆ ವಿವರಿಸಿದರು.

ತುರ್ತು ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳ ಬಳಿ ತಲಾ 5ಕೋಟಿ ರೂ.ಇದೆ. ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಣೆಗೆ ವಿಳಂಬ ಮಾಡುವುದು ಸರಿಯಲ್ಲ. ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ತೆರೆದು ಪರಿಸ್ಥಿತಿ ಅವಲೋಕಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಲಕಾಲಕ್ಕೆ ಪರಿಸ್ಥಿತಿ ಪರಾಮರ್ಶೆ ನಡೆಸಿದೆ ಎಂದರು.

ರಾಷ್ಟೀಯ ಹೆದ್ದಾರಿ 66ರ ಅಗಲೀಕರಣದಿಂದ ಉಂಟಾದ ಭೂ ಕುಸಿತ ತಡೆಯಲು ತುರ್ತು ಕ್ರಮ ಕೈಗೊಳ್ಳಲಾಗಿದೆ. ಹೆದ್ದಾರಿ ಪಕ್ಕದಲ್ಲಿರುವ ಕುಟುಂಬದವರನ್ನು ಸೂಕ್ತ ಸ್ಥಳಗಳಿಗೆ ಕಳುಹಿಸಲಾಗಿದೆ. ಅಂತಹ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಹ ಕ್ರಮ ಕೈಗೊಳ್ಳಲಾಗಿದ್ದು ಅಗತ್ಯವಿರುವೆಡೆ ಬೋರ್‍ವೆಲ್ ಕೊರೆಸಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರ 6, ಬೆಂಗಳೂರು ಗ್ರಾಮಾಂತರ 2, ಚಿಕ್ಕಬಳ್ಳಾಪುರ 9, ಹಾಸನ 35, ಮಂಡ್ಯ 26, ದಾವಣಗೆರೆ 13, ಚಿಕ್ಕಮಗಳೂರು 51, ತುಮಕೂರು 10, ಉತ್ತರಕನ್ನಡ 16, ವಿಜಯಪುರ 22, ಬೆಳಗಾವಿಯ 4 ಹಳ್ಳಿಗಳಿಗೆ  ಟ್ಯಾಂಕರ್ ಮೂಲಕ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು. ಜೂನ್ 1ರಿಂದ 10ರವರೆಗೆ ರಾಜ್ಯದಲ್ಲಿ ಸರಾಸರಿ ವಾಡಿಕೆಗಿಂತ ಶೇ.73 ರಷ್ಟು ಹೆಚ್ಚು  ಮಳೆಯಾಗಿದೆ. ಬಿತ್ತನೆ ಪ್ರಮಾಣವೂ ಕಳೆದ ವರ್ಷಕ್ಕಿಂತ ಜಾಸ್ತಿ ಆಗಿದೆ ಎಂದರು.

ಕಂದಾಯ  ಇಲಾಖೆಗೆ 1067 ಸರ್ವೆಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ಬಾಕಿ ಪೋಡಿ ಪ್ರಕರಣಗಳ ಇತ್ಯರ್ಥಕ್ಕೆ ಅನುಕೂಲ ಆಗಲಿದೆ. ಸರ್ವೆಯರ್‍ಗಳು ತರಬೇತಿ ಪಡೆಯುತ್ತಿದ್ದು ಶೀಘ್ರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಕಂದಾಯ ಸಚಿವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

R.V.deshpande Tax ಜಾನುವಾರು ವಾಟ್ಸಾಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ