ಕಳ್ಳನೊಬ್ಬನನ್ನು ಚಾಕುವಿನಿಂದ ಕತ್ತು ಕೊಯ್ದು ಕೊಲೆ !

Kannada News

25-05-2017

ಬೆಂಗಳೂರು:- ಸದಾಶಿವನಗರದ ಸಂಜೀವಪ್ಪ ಕಾಲೋನಿಯಲ್ಲಿ ಬುಧವಾರ ಮಧ್ಯರಾತ್ರಿ ಹಳೆ ಕಳ್ಳನೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮತ್ತಿಕೆರೆಯ ನೇತಾಜಿ ಲೇಔಟ್‌ನ ಲಕ್ಷ್ಮಣ್(೨೪)ಕೊಲೆಯಾದ ವ್ಯಕ್ತಿ.ಈತ ಕಳ್ಳನಾಗಿದ್ದು, ನ್ಯೂ ಬಿಇಎಲ್ ರಸ್ತೆಯ ಸಂಜೀವಪ್ಪ ಕಾಲೋನಿಯ ರೈಲ್ವೆ ಹಳಿಯ ಬಳಿ ಮದ್ಯಪಾನ ಮಾಡಲು ಹೋಗಿದ್ದಾಗ ಕಾದು ಕುಳಿತಿದ್ದ ದುಷ್ಕರ್ಮಿಗಳು ಚಾಕುವಿನಿಂದ ಆತನ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಕೊಳಾಯಿ(ಪ್ಲಂಬರ್) ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ೨೦೧೩ ರಲ್ಲಿ ಲ್ಯಾಪ್‌ಟಾಪ್ ಕಳವುಮಾಡಿದ್ದು ಈ ಸಂಬಂಧ ಯಶವಂತಪುರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣವು  ನ್ಯಾಯಾಲಯದ ವಿಚಾರಣೆಯಲ್ಲಿದೆ. ಲ್ಯಾಪ್‌ಟಾಪ್ ಕಳವು ಪ್ರಕರಣ ಹೊರತುಪಡಿಸಿ ಮತ್ಯಾವುದೇ ಪ್ರಕರಣ ಲಕ್ಷ್ಮಣ್ ಮೇಲೆ ದಾಖಲಾಗಿರಲಿಲ್ಲ, ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಮದ್ಯಪಾನ ಮಾಡಲು ಸಂಜೀವಪ್ಪ ಕಾಲೋನಿಯ ರೈಲ್ವೆ ಹಳಿ ಬಳಿಗೆ ಹೋಗಿದ್ದ ಲಕ್ಷ್ಮಣ್‌ನನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಪೊಲೀಸರು ಕೃತ್ಯ ನಡೆಸಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ