ರಾಜ್ಯದ ಹಲವೆಡೆ ಮುಂಗಾರು ಆರ್ಭಟ

Heavy Rain at chikmagalur, kodagu, shimoga

11-06-2018

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟಿಸ ತೊಡಗಿದ್ದು ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ ಒಂದುಕಡೆ ರೈತರ ಮೊಗದಲ್ಲಿ ಹರ್ಷದ ಹೊನಲು ಹರಿದಿದೆ. ಮತ್ತೊಂದೆಡೆ ಪ್ರವಾಹದ ಪರಿಸ್ಥಿತಿ ಉಂಟಾಗಿ ಜಮೀನಿನಲ್ಲಿ ಬೆಳೆದು ನಿಂತಿರುವ ಬೆಳೆಗಳು ನಾಶವಾಗಿ ರೈತರನ್ನು ಚಿಂತೆಗೀಡುಮಾಡಿದೆ.

ಭಾಗಮಂಡಲ ಜಲಾವೃತ: ಕೊಡಗಿನಲ್ಲಿ ಕಳೆದ 10ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಎರಡು ದಿನಗಳಿಂದ ಬಿರುಗಾಳಿಸಹಿತ ಸುರಿದ ವರ್ಷಧಾರೆಗೆ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

ಭಾಗಮಂಡಲದಲ್ಲೂ ಅಧಿಕ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಯಾತ್ರಾರ್ಥಿಗಳಿಗೆ ತಲಕಾವೇರಿಗೆ ತೆರಳುವ ಅವಕಾಶವನ್ನು ನಿರ್ಬಂಧಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗಿನಾದ್ಯಂತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಂದು ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ರಜೆ ಘೋಷಿಸಿದ್ದಾರೆ.

ನೀರಿನ ಮಟ್ಟ ಏರಿಕೆ: ಕೇರಳದ ವೈನಾಡು ಸೇರಿದಂತೆ ಕೊಡಗಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯ ಕೆಆರ್‍ಎಸ್‍ಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದೇ ರೀತಿ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣವು ಹೆಚ್ಚಳವಾಗಿದ್ದು, ಪ್ರಸ್ತುತ ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಮಟ್ಟ 80 ಅಡಿಗೆ ಏರಿದೆ. 8,478 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 323 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ತಿಂಗಳಲ್ಲಿ ಕೆಆರ್‍ಎಸ್ ಜಲಾಶಯ 69.80 ಅಡಿಗೆ ತಲುಪಿತ್ತು. ಈಗ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟ ಹೆಚ್ಚಳವಾಗಿದೆ.

ಕಬಿನಿ ಜಲಾಶಯದ ನೀರಿನ ಮಟ್ಟ 84 ಅಡಿಯಷ್ಟಿದ್ದು, ಈಗ 66 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಇದೇ ರೀತಿ ಮಳೆ ಬಿದ್ದರೆ ಒಂದು ವಾರದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ವರುಣನ ಭೋರ್ಗರೆತಕ್ಕೆ ಹೇಮಾವತಿ ಜಲಾಶಯದ ಒಳ ಹರಿವು ಏರಿಕೆಯಾಗುತ್ತಿದೆ. ಧಾರಾಕಾರ ಮಳೆಗೆ ಸೋಮವಾರ ಪೇಟೆ-ಬೇಲೂರು ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದಿದ್ದು, ವಾಹನ ಸಂಚಾರ ಏರುಪೇರಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದೆಡೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ವರುಣ ಅಬ್ಬರಿಸಿದ್ದಾನೆ. ಮಳೆಯಿಂದಾಗಿ ಮೂಡಿಗೆರೆ ತಾಲ್ಲೂಕಿನ ಹೆಬ್ಬಾಳು ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೆಬ್ಬಾಳು ಸೇತುವೆ ಮುಳುಗಡೆಗೆ 4 ಅಡಿಯಷ್ಟು ಮಾತ್ರ ಬಾಕಿ ಇದೆ. ಹೊರನಾಡು ಮತ್ತು ಕಳಸಾ ನಡುವಿನ ಸಂಪರ್ಕ ಕಡಿದುಕೊಂಡಿದ್ದು, ಯಾತ್ರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕುಮಾರಧಾರಾ ನದಿ ತುಂಬಿದ್ದು ನೀರಿನ ಮಟ್ಟ ಹೆಚ್ಚಾಗಿದೆ. ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು, ಭಕ್ತರಿಗೆ ನದಿಗಿಳಿಯದಂತೆ ಸೂಚನೆ ನೀಡಲಾಗಿದೆ.

ಇದರಿಂದಾಗಿ ಕ್ಷೇತ್ರಕ್ಕೆ ಬಂದ ಭಕ್ತರು ಸ್ನಾನಘಟ್ಟಕ್ಕೆ ಹೋಗಲಾಗದೆ ಮೇಲ್ಭಾಗದ ನೀರಿನಲ್ಲೇ ಸ್ನಾನ ಮಾಡಬೇಕಾಗಿದೆ. ಭಕ್ತಾದಿಗಳು ಸ್ನಾನಘಟ್ಟದ ಹೊರಗೆ ಬಂದಂತಹ ನೀರಿನಲ್ಲೇ ತೀರ್ಥಸ್ನಾನವನ್ನು ಮಾಡುತ್ತಿದ್ದಾರೆ. ಉಪ್ಪಿನಂಗಡಿ -ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಕಡಬ ಬಳಿಯ ಹೊಸ್ಮಠ ಸೇತುವೆಯೂ ನೀರಿನಿಂದ ಮುಳುಗಡೆಯಾಗಿದ್ದು, ಈ ರಸ್ತೆಯ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಹೊಸ್ಮಠ ಸೇತುವೆ ಪ್ರತೀ ಮಳೆಗಾಲದಲ್ಲಿ ಹಲವು ಬಾರಿ ಮುಳುಗಡೆಯಾಗುತ್ತಿದೆ. ಇದರಿಂದ ರಸ್ತೆ-ಸಂಚಾರ ಹಾಗೂ ಶಾಲಾ ಕಾಲೇಜುಗಳಿಗೆ ಅಡಚಣೆಯಾಗುತ್ತಿದೆ. ಸದ್ಯ ಇದರ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸೇತುವೆ ಕಡೆಯಿಂದ ನೀರು ಹರಿಯಲು ಬಿಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಇತ್ತೀಚೆಗಷ್ಟೇ ಹಳೆ ಸೇತುವೆ ಕುಸಿದಿತ್ತು.

ದಾಖಲೆ ಮಳೆ: ಜೂನ್ 1ರಿಂದ 10ರವರೆಗೆ ರಾಜ್ಯದಲ್ಲಿ ಸರಾಸರಿ ಶೇಕಡಾ 71ರಷ್ಟು ಮಳೆ ಬಿದ್ದಿದೆ. ಅತಿ ಹೆಚ್ಚು ಮಳೆ ಉಡುಪಿ ಜಿಲ್ಲೆಯಲ್ಲಿ ದಾಖಲಾಗಿದೆ. ಇಲ್ಲಿ ಸರಾಸರಿ 361 ಮಿಲಿ ಮೀಟರ್ ಮಳೆಯಾಗಿದೆ. ಕಳೆದ ವರ್ಷ ಇಲ್ಲಿ ಇದೇ ಸಮಯಕ್ಕೆ 254 ಮಿಲಿ ಮೀಟರ್ ಮಳೆ ಸುರಿದಿತ್ತು.

ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಸರಾಸರಿಗಿಂತ ದುಪ್ಪಟ್ಟು ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 59.63 ಮಿಲಿ ಮೀಟರ್ ಮಳೆಯಾಗಿದ್ದು ಇದೇ ಸಂದರ್ಭದಲ್ಲಿ ಇಲ್ಲಿ ಸರಾಸರಿ 31.90 ಮಿಲಿ ಮೀಟರ್ ಮಳೆ ಸುರಿಯುತ್ತದೆ.

ನಗರದಲ್ಲಿ ಇನ್ನು 3 ದಿನ ಮಳೆ: ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಆಗಾಗ ತುಂತುರು ಮಳೆ ಜೊತೆಗೆ ಭಾರಿ ಮಳೆಯು ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ.! ಬಲವಾದ ನೈರುತ್ಯ ಮುಂಗಾರಿನ ಕಾರಣದಿಂದ ಇನ್ನು ಮೂರು ದಿನ ಮಳೆ ಸುರಿಯಲಿದ್ದು ಸಾರ್ವಜನಿಕರು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

ನಗರ ಹೊರತುಪಡಿಸಿ ರಾಜ್ಯದ ಬೇರೆಲ್ಲಾ ಜಿಲ್ಲೆಗಳಲ್ಲಿ ಈ ಬಾರಿಯ ಮುಂಗಾರು ಮಾರುತದ ಆರಂಭದಲ್ಲಿ ಹೆಚ್ಚು ಮಳೆ ದಾಖಲಾಗಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಹೆಚ್ಚುವರಿ ಶೇಕಡಾ 81ರಷ್ಟು ಮಳೆಯಾಗಿದ್ದು ಬೆಂಗಳೂರು ನಗರ ಭಾಗದಲ್ಲಿ ಶೇಕಡಾ 14ರಷ್ಟು ಮಳೆ ಕೊರತೆಯಾಗಿದೆ.

ಕಳೆದ ವಾರದಲ್ಲಿ ನಗರದಲ್ಲಿ 10.49 ಮಿಲಿ ಮೀಟರ್ ಮಳೆಯಾಗಿದ್ದು ಸರಾಸರಿ 21.40 ಮಿಲಿ ಮೀಟರ್ ಮಳೆ ಸುರಿದಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಹಂಚಿಕೆಯಾಗುವ ಸಾಧ್ಯತೆಯಿದ್ದು ಮಳೆಯ ತೀವ್ರತೆ ಇತರ ಭಾಗಗಳಲ್ಲಿ ಕೂಡ ಇಳಿಕೆಯಾಗುವ ನಿರೀಕ್ಷೆಯಿದೆ.


ಸಂಬಂಧಿತ ಟ್ಯಾಗ್ಗಳು

Rain Monsoon ಮಿಲಿ ಮೀಟರ್ ಕರಾವಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ