ನವ ದಂಪತಿಗೆ ಪೋಷಕರಿಂದಲೇ ಕೊಲೆ ಬೆದರಿಕೆ!

A Newly married couple has threat from their parents!

09-06-2018

ಬೆಂಗಳೂರು: ಪ್ರೀತಿಸಿ ನಗರದ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಬಳಿಕ ಯಲಹಂಕದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದ ನವ ದಂಪತಿಯ ಜೀವನಕ್ಕೆ ಜಾತಿ ಅಡ್ಡಿಯಾಗಿ ಕೊಲೆ ಬೆದರಿಕೆ ಎದುರಾಗಿದೆ. ಜಾತಿ ಬೇರೆ ಬೇರೆ ಎನ್ನುವ ಕಾರಣಕ್ಕೆ ಪೋಷಕರೇ ಪ್ರೇಮಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಬಳಿ ನಡೆದಿದೆ.

ಹುಲಿಯೂರುದುರ್ಗದ ನಿವಾಸಿ ಸಿಂಧು ಮತ್ತು ಹಂಗಾರಹಳ್ಳಿ ನಿವಾಸಿ ಜಗದೀಶ್ ಕಳೆದ ಎರಡು ವರ್ಷಗಳಿಂದ ನಗರದ ಖಾಸಗಿ ಕಂಪೆನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಂಧು ಮತ್ತು ಜಗದೀಶ್ ನಡುವೆ ಪ್ರೇಮಾಂಕುರವಾಗಿದೆ. ಇತ್ತ ಸಿಂಧು ಪೋಷಕರು ಮಗಳಿಗೆ ಮದುವೆ ಮಾಡುವ ಸಲುವಾಗಿ ಹುಡುಗನನ್ನ ಹುಡುಕಿ ನಿಶ್ಚಿತಾರ್ಥ ತಯಾರಿ ನಡೆಸಿದ್ದಾರೆ.

ವಿಷಯ ತಿಳಿದ ಸಿಂಧು ಪ್ರಿಯಕರ ಜಗದೀಶ್‍ಗೆ ನಿಶ್ಚಿತಾರ್ಥದ ವಿಚಾರ ತಿಳಿಸಿದ್ದಾಳೆ. ಇಬ್ಬರೂ ಪ್ರಬುದ್ಧರಾಗಿದ್ದರಿಂದ ನಗರದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಇದರಿಂದ ಕೋಪಗೊಂಡಿರುವ ಪೋಷಕರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಂಧು ಆರೋಪಿಸಿದ್ದಾರೆ.

ನಾವಿಬ್ಬರೂ ಎರಡು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಜೊತೆಗೆ ನಮ್ಮ ಜಾತಿ ಬೇರೆಯಾದ್ದರಿಂದ ನಮ್ಮ ಪೊಷಕರು ಮದುವೆಗೆ ಒಪ್ಪುವುದಿಲ್ಲ ಎಂದು ಮೊದಲೇ ನಾನು ಸಿಂಧುಗೆ ಹೇಳಿದ್ದೆ. ಆದರೆ ನಾನು ಮದುವೆಯಾಗದಿದ್ದರೆ ಆಕೆ ಬದುಕೋದಿಲ್ಲ ಎಂದಳು. ಹಾಗಾಗಿ ನಾವಿಬ್ಬರು ಮದುವೆಯಾಗಿದ್ದೀವಿ. ಈಗ ಆಕೆಯ ಪೋಷಕರು ನನ್ನ ಮನೆಯವರಿಗೆ ತೊಂದರೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ, ಪೊಲೀಸರನ್ನ ಬಳಸಿಕೊಂಡು ಎದುರಿಸುತ್ತಿದ್ದಾರೆ. ಹಾಗಾಗಿ ರಕ್ಷಣೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಜಾತಿ ಬೇಧ ಎಲ್ಲೆ ಮೀರಿದ ಪ್ರೀತಿಗೆ, ಪೋಷಕರ ಕಾರಣದಿಂದಾಗಿ ಜಾತಿ ತಾರತಮ್ಯ ಉಂಟಾಗಿದೆ. ಅಂತರ್ಜಾತಿಯವರನ್ನು ಪ್ರೀತಿಸಿದರು ಎಂಬ ಕಾರಣಕ್ಕೆ ಪೋಷಕರೇ ಪ್ರೇಮಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸದ್ಯ ರಕ್ಷಣೆ ಕೋರಿ ಬಂದಿರುವ ಪ್ರೇಮಿಗಳಿಗೆ ಪೊಲೀಸರು ಸಾಂತ್ವನ ಹೇಳಿದ್ದು, ಪ್ರೇಮಿಗಳ ಸಮಸ್ಯೆಗೆ ಸ್ಪಂದಿಸುವಂತೆ ಕುಣಿಗಲ್ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Love Caste ಬೆದರಿಕೆ ರಿಜಿಸ್ಟ್ರಾರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ