'ಅಧ್ಯಕ್ಷರ ಮಾತುಗಳು ನನಗೆ ಸಮಾಧಾನ ನೀಡಿವೆ’- ಎಂ.ಬಿ.ಪಾಟೀಲ್09-06-2018

ಬೆಂಗಳೂರು: ಕಳೆದ ಇಪ್ಪತ್ತೇಳು ವರ್ಷಗಳಿಂದ ಪಕ್ಷ ಕಟ್ಟಿದವನು ನಾನು. ಆದರೆ ನನಗೇ ಸಚಿವ ಸಂಪುಟದಲ್ಲಿ ಸ್ಥಾನ ನೀಡದೆ ಅವಮಾನ ಮಾಡಲಾಗಿದೆ. ಈ ಕುರಿತ ನನ್ನ ನೋವನ್ನು ಪಕ್ಷದ ಅಧ್ಯಕ್ಷರಿಗೆ ಹೇಳಿದ್ದೇನೆ. ಆದರೆ ಎಷ್ಟೇ ನೋವಾಗಿದ್ದರೂ ಪಕ್ಷದಲ್ಲೇ ಮುಂದುವರಿಯುತ್ತೇನೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ಸ್ಪಷ್ಟ ಪಡಿಸಿದರು. ನಾನು 1991 ರಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇನೆ. ಬೆಳೆಸಿದ್ದೇನೆ. ಆದರೆ ನನಗೆ ಅವಮಾನ ಮಾಡಲಾಗಿದೆ. ಈ ಕುರಿತು ನನಗಾದ ನೋವನ್ನು ಪಕ್ಷದ ನಾಯಕರಿಗೆ ವಿವರಿಸಲು ಬಂದಿದ್ದೇನೆ. ಅಧ್ಯಕ್ಷರ ಮಾತುಗಳು ನನಗೆ ಸಮಾಧಾನ ನೀಡಿವೆ ಎಂದರು.

ರಾಹುಲ್ ಗಾಂಧಿ ಅವರ ಜೊತೆಗಿನ ಮಾತುಕತೆಯಿಂದ ನನಗೆ ಸಮಾಧಾನವಾಗಿದೆ. ಅವರ ಜೊತೆ ಏನು ಮಾತುಕತೆ ನಡೆಯಿತು ಎಂದು ಪಕ್ಷದಲ್ಲಿರುವ ಸ್ನೇಹಿತರಿಗೆ ವಿವರಿಸುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದರು. ನಾನು ಉಪಮುಖ್ಯಮಂತ್ರಿ ಸ್ಥಾನವನ್ನಾಗಲೀ, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನಾಗಲೀ ಅಥವಾ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದಾಗಲೀ ಕೇಳಲು ಇಲ್ಲಿಗೆ ಬಂದಿಲ್ಲ. ಅದರ ಬದಲು ನನಗಾದ ನೋವಿನ ಕುರಿತು ವಿವರ ನೀಡಲು ಬಂದಿದ್ದೇನೆ. ವಿವರ ನೀಡಿದ್ದೇನೆ ಎಂದರು.

ನನಗೆ ಯಾವ ಸ್ಥಾನವೂ ಬೇಕಾಗಿಲ್ಲ. ವೀರಶೈವ-ಲಿಂಗಾಯತ ವಿವಾದಕ್ಕೆ ಸಂಬಂಧಿಸಿದ ಹೋರಾಟದಿಂದ ನನಗೆ ಹಿನ್ನಡೆಯಾಗಿದೆ ಎಂಬುದೂ ಸರಿಯಲ್ಲ. ಅದು ಪ್ರತ್ಯೇಕ ವಿಷಯ ಎಂದರು. ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ನನ್ನ ಹೋರಾಟಕ್ಕೆ ರಾಷ್ಟ್ರ ಮಟ್ಟದಲ್ಲೇ ಉತ್ತರ ಸಿಕ್ಕಿದೆ. ಈಗಿನ ಬೆಳವಣಿಗೆಗೂ ಅದಕ್ಕೂ ಹೋಲಿಕೆ ಬೇಕಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು. ಎಐಸಿಸಿ ಅಧ್ಯಕ್ಷರ ಜೊತೆಗಾಗಲೀ, ಇತರ ನಾಯಕರ ಜತೆಗಾಗಲೀ ಏನು ಮಾತನಾಡಿದೆ? ಅಂತ ನಾನು ಹೇಳಲು ಬಯಸುವುದಿಲ್ಲ. ಅದನ್ನು ಹೇಳಬೇಕಾಗಿಯೂ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಇದಕ್ಕೂ ಮುನ್ನ ಡಿಸಿಎಂ ಸ್ಥಾನ ಸಿಗದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೆ ಎಂ.ಬಿ.ಪಾಟೀಲರು ಬಂಡಾಯ ಎದ್ದಿದ್ದು ಅವರ ಹಿಂದೆ ಇಪ್ಪತ್ತಕ್ಕೂ ಹೆಚ್ಚು ಶಾಸಕರಿದ್ದಾರೆ ಎಂಬ ಮಾತಿನಿಂದ ಕೈ ಪಾಳೆಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಆದರೆ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲರಿಗೆ ದಿಲ್ಲಿಗೆ ಬರುವಂತೆ ಬುಲಾವ್ ನೀಡಿದ ಪಕ್ಷದ ವರಿಷ್ಟರು ಸಧ್ಯದ ಬೆಳವಣಿಗೆಗಳ ಕುರಿತು ತಮ್ಮ ಅಸಹಾಯಕತೆ ತೋಡಿಕೊಂಡಿದ್ದು, ಈ ಹಂತದಲ್ಲಿ ಯಾವ ಸ್ಥಾನಮಾನದ ಭರವಸೆ ನೀಡಲು ಸಾಧ್ಯವಿಲ್ಲ. ಬದಲಿಗೆ ಮಂತ್ರಿ ಮಂಡಲ ವಿಸ್ತರಣೆಯ ಸಂದರ್ಭದಲ್ಲಿ ನಿಮ್ಮ ಹೆಸರನ್ನು ಪರಿಗಣಿಸುತ್ತೇವೆ ಎಂದು ವಿವರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.B patil Delhi ಭರವಸೆ ಮಂತ್ರಿ ಮಂಡಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ