ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ!

DCM warn to senior police officials!

09-06-2018

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಹತಾಶಗೊಂಡ ಸಮಾಜಘಾತುಕ ಶಕ್ತಿಗಳು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿಂದು ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಅವರು, ಹತಾಶ ಶಕ್ತಿಗಳು ಇಂತಹವೇ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಕಟ್ಟುನಿಟ್ಟಾಗಿರಿ ಎಂದು ಸೂಚಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂತು. ಇದರ ಪರಿಣಾಮವಾಗಿ ಯಾವೊಂದು ಪಕ್ಷವೂ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪರಸ್ಪರ ಕೈಗೂಡಿಸಿ ಮೈತ್ರಿಕೂಟ ಸರ್ಕಾರ ರಚಿಸಬೇಕಾದ ಸ್ಥಿತಿ ಬಂತು. ಆದರೆ ಈ ಸೂಕ್ಷ್ಮ ಸನ್ನಿವೇಶದಲ್ಲಿ ಹಾಗೆ ಮಾಡದೆ ಬೇರೆ ದಾರಿಯೂ ಇರಲಿಲ್ಲ. ಆದರೆ ಈ ಬೆಳವಣಿಗೆಯಿಂದ ಹಲ ಶಕ್ತಿಗಳು ಹತಾಶಗೊಂಡಿವೆ.

ಈ ಶಕ್ತಿಗಳು ಸಮಯ ಕಾದು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು, ಆ ಮೂಲಕ ಸರ್ಕಾರವನ್ನು ಉರುಳಿಸಲು ಯತ್ನಿಸಬಹುದು. ಹೀಗಾಗಿ ಪರಿಸ್ಥಿತಿಯನ್ನು ಕಟ್ಟೆಚ್ಚರದಿಂದ ಗಮನಿಸಿ. ಯಾವುದೇ ಅಗತ್ಯ ಕ್ರಮ ಕೈಗೊಳ್ಳಲು ಹಿಂಜರಿಯಬೇಡಿ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುವ ಶಕ್ತಿಗಳು ಈಗ ನಿರ್ದಿಷ್ಟ ಸ್ವರೂಪದಲ್ಲಿವೆ ಎಂದು ಹೇಳಲು ಸಾಧ್ಯವಿಲ್ಲ.ಯಾವುದೇ ಶಕ್ತಿಗಳು ಈ ದುಸ್ಸಾಹಸಕ್ಕೆ ಕೈ ಹಾಕಬಹುದು. ಹೀಗಾಗಿ ಪೊಲೀಸ್ ಇಲಾಖೆಯ ಹದ್ದಿನ ಕಣ್ಣು ಎಲ್ಲ ದಿಕ್ಕಿನಲ್ಲೂ ಕೆಲಸ ಮಾಡಲಿ.

ಇದೇ ರೀತಿ ಸಮಾಜ ಬಾಹಿರ ಚಟುವಟಿಕೆಗಳು ನಡೆಯುವ ಕೇಂದ್ರಗಳ ಮೇಲೆ ಗಮನವಿಡಿ. ಗಾಂಜಾ ಮಾರಾಟದಿಂದ ಹಿಡಿದು, ಸ್ಕಿಲ್ ಗೇಮ್ ತನಕ, ಗೂಂಡಾಗಿರಿಯಿಂದ ಹಿಡಿದು ಸೈಬರ್ ಅಪರಾಧಗಳ ತನಕ ಎಲ್ಲ ವಿಷಯಗಳಲ್ಲೂ ಕಟ್ಟೆಚ್ಚರ ವಹಿಸಬೇಕು.

ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಕಾರಣಕ್ಕಾಗಿ ಯಾರೋ ಹತಾಶೆಯಿಂದ ಪರಿಸ್ಥಿತಿ ಹದಗೆಡುವಂತೆ ಮಾಡಲು ಅವಕಾಶ ಸಿಗಬಾರದು ಎಂದು ಗೃಹ ಸಚಿವ ಪರಮೇಶ್ವರ್ ಕಟ್ಟು ನಿಟ್ಟಿನ ಸೂಚನೆ ನೀಡಿದರು ಎಂದು ಉನ್ನತ ಮೂಲಗಳು ಹೇಳಿವೆ. ಈ ಮಧ್ಯೆ ಇಲಾಖೆಯ ಆಧುನೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ತಾವೇ ಗೃಹ ಸಚಿವರಾಗಿದ್ದಾಗ ನೀಡಿದ್ದ ಆದೇಶಗಳ ಕುರಿತು ಸಭೆಯಲ್ಲಿ ಪರಮೇಶ್ವರ್ ಅವರು ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ  ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರದ ಪೊಲೀಸ್ ಕಮೀಷನರ್ ಸೇರಿದಂತೆ ಹಲ ಉನ್ನತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

G. Parameshwara commissioner ಚಟುವಟಿಕೆ ದುಸ್ಸಾಹಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ