ಎಂ.ಬಿ ಪಾಟೀಲ್ ಗೆ ಹೈಕಮಾಂಡ್ ಉತ್ತರ ಏನು ಗೊತ್ತಾ?

mla m.b.Patil Met AICC president rahul Gandhi at delhi

09-06-2018

ಬೆಂಗಳೂರು: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದವರು ಅಹಿಂದ ಸಮುದಾಯಗಳ ಮತದಾರರು. ಹೀಗಾಗಿ ಈ ಸಮುದಾಯಗಳಿಂದ ಬಂದವರಿಗೆ ಡಿಸಿಎಂ ಪಟ್ಟ ನೀಡಲಾಗಿದೆ. ಯಾವ ಕಾರಣಕ್ಕೂ ನಿಮ್ಮನ್ನು ಆ ಹುದ್ದೆಯ ನೀಡಲು ಸಾಧ್ಯವಿಲ್ಲ ಎಂದು ಲಿಂಗಾಯತ ನಾಯಕ ಎಂ.ಬಿ.ಪಾಟೀಲ್ ಅವರಿಗೆ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ.

ಇದೇ ರೀತಿ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಕೂಡಾ ನಿಮಗೆ ಕೊಡುವುದು ಕಷ್ಟ. ಈ ಕುರಿತು ಪಕ್ಷದ ಎಲ್ಲರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ವತ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೇರವಾಗಿ ಹೇಳಿದ್ದಾರೆ.

ದೆಹಲಿಯಲ್ಲಿಂದು ತಮ್ಮನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ್ ಅವರ ಬಳಿ ನೇರವಾಗಿ ಮಾತನಾಡಿದ ರಾಹುಲ್ ಗಾಂಧಿ, ನೀವು ಪಕ್ಷದ ಪ್ರಮುಖ ನಾಯಕರು ಎಂಬುದು ನಮಗೆ ಗೊತ್ತು. ಪಕ್ಷ ಹೇಳಿದ ಕೆಲಸವನ್ನು ನಿಷ್ಟೆಯಿಂದ ಮಾಡಿದ್ದೀರಿ ಎಂಬುದೂ ತಿಳಿದಿದೆ. ಆದರೆ ಇದಕ್ಕಾಗಿ ನಿಮಗೆ ಉಪಮುಖ್ಯಮಂತ್ರಿ ಹುದ್ದೆಯನ್ನೋ, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೋ ತಕ್ಷಣ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈಗಾಗಲೇ ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದೇವೆ. ಹೀಗಿರುವಾಗ ಎರಡನೇ ಡಿಸಿಎಂ ಹುದ್ದೆಯ ಸೃಷ್ಟಿ ಮೈತ್ರಿಕೂಟದ ಅಂಗಪಕ್ಷ ಜೆಡಿಎಸ್‍ಗೆ ಇರಿಸುಮುರಿಸುಂಟು ಮಾಡುತ್ತದೆ. ಇತಿಮಿತಿಗಳನ್ನು ನೀವು ಸಹ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಗಣನೀಯ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ. ವೀರಶೈವ-ಲಿಂಗಾಯತ ವಿವಾದದಿಂದ ಪಕ್ಷಕ್ಕೆ ಆದ ಲಾಭವೇನಿಲ್ಲ. ಹೀಗಿರುವಾಗ ಆ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ಸಾಧ್ಯವೂ ಇಲ್ಲ.

ಯಾಕೆಂದರೆ ಸಧ್ಯದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರಿಗಿಂತ ಪ್ರಬಲ ಲಿಂಗಾಯತ ನಾಯಕ ಗೋಚರವಾಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರು ಇನ್ನೂ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ನೀವು ಉಪಮುಖ್ಯಮಂತ್ರಿಯಾದ ಕೂಡಲೇ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಎನ್ನಲು ಸಧ್ಯಕ್ಕಂತೂ ಯಾವ ಕಾರಣಗಳೂ ಇಲ್ಲ. ಹೀಗಾಗಿ ಪಕ್ಷಕ್ಕೆ ಬಲ ನೀಡುವ ವಿಷಯ ಬಂದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕಾತಿ ವಿಷಯ ಬಂದಾಗ ನಿಮ್ಮ ಹೆಸರನ್ನು ಪರಿಗಣಿಸೋಣ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ನಮ್ಮನ್ನು ಬೆಂಬಲಿಸಲು ಸಾಧ್ಯವೇ ಎಂಬುದನ್ನು ನೋಡೋಣ ಎಂದಿದ್ದಾರೆ.

ಆದರೆ ಸಧ್ಯದ ಸ್ಥಿತಿಯಲ್ಲಿ ಡಿಸಿಎಂ ಹುದ್ದೆಯನ್ನು ನಿಮಗೆ ಕೊಡಲು ಸಾಧ್ಯವಿಲ್ಲ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮನ್ನು ನೇಮಕ ಮಾಡಿಬಿಡುತ್ತೇವೆ ಎಂದು ಭರವಸೆ ಕೊಡಲೂ ಸಾಧ್ಯವಿಲ್ಲ. ಹೀಗಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಮತ್ತಷ್ಟು ಕಾಲ ನೀವು ಕಾಯಬೇಕು. ಸೂಕ್ತ ಸನ್ನಿವೇಶ ನಿರ್ಮಾಣವಾಗುವವರೆಗೆ ಪಕ್ಷ ನಿಮಗೆ ಇಂತಹ ಸ್ಥಾನವನ್ನೇ ನೀಡುತ್ತದೆ ಎಂದು ಭರವಸೆ ಕೊಡುವ ಸ್ಥಿತಿಯಲ್ಲಿಲ್ಲ. ಮಂತ್ರಿ ಮಂಡಲ ವಿಸ್ತರಣೆಯ ಕೆಲಸ ಬಾಕಿ ಇದೆ. ಹೀಗಾಗಿ ವಿಸ್ತರಣೆಯ ಸಂದರ್ಭದಲ್ಲಿ ನಿಮಗೆ ಅವಕಾಶ ನೀಡುವ ಕುರಿತು ಯೋಚಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದು ಈ ಬೆಳವಣಿಗೆಯಿಂದ ಎಂ.ಬಿ.ಪಾಟೀಲ್ ಮತ್ತಷ್ಟು ಅಸಮಾಧಾನಗೊಂಡಿದ್ದಾರೆ.

ಹಾಗಂತಲೇ ಕೈ ಪಾಳೆಯದ ಪ್ರಮುಖ ನಾಯಕರನ್ನು ಭೇಟಿ ಮಾಡಿದ ಅವರು, ಲಿಂಗಾಯತ ಸಮುದಾಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ನಿಲ್ಲಬೇಕು ಎಂದರೆ ಆ ಸಮುದಾಯಕ್ಕೆ ಸೇರಿದ ನನ್ನನ್ನು ಡಿಸಿಎಂ ಹುದ್ದೆಯ ಮೇಲೆ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕೂರಿಸಬೇಕು.

ಇಲ್ಲದೇ ಹೋದರೆ ಆ ಸಮುದಾಯದ ಮತಗಳನ್ನು ಸೆಳೆಯುವುದು ಕಷ್ಟ. ಇತ್ತೀಚಿನ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಲಿಂಗಾಯತ ಮತಗಳು ಬರದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಲಿಂಗಾಯತ ನಾಯಕತ್ವ ಪಲ್ಲಟಗೊಳ್ಳುವ ಸ್ಥಿತಿ ಬರುತ್ತದೆ. ಇಂತಹ ಸ್ಥಿತಿಯಲ್ಲಿ ಪಕ್ಷ ಲಿಂಗಾಯತ ನಾಯಕತ್ವವನ್ನು ವಶಪಡಿಸಿಕೊಳ್ಳಲು ಅಣಿಯಾಗಿರಬೇಕಾಗುತ್ತದೆ. ಹಾಗಾಗದಿದ್ದರೆ ಅದರ ಲಾಭವನ್ನು ಯಥಾ ಪ್ರಕಾರ ಬಿಜೆಪಿಯೇ ಪಡೆದುಕೊಳ್ಳುತ್ತದೆ ಎಂದು ಎಂ.ಬಿ.ಪಾಟೀಲ್ ಅವರು ಹೈ ಕಮಾಂಡ್‍ಗೆ ವಿವರಿಸಿದ್ದಾರೆನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

M.B Patil High Command ಡಿಸಿಎಂ ಕೆಪಿಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ