ಬೆಂಗಳೂರಿನಲ್ಲಿ ಪಾಕಿಸ್ತಾನಿ ಶಂಕಿತರು !

Kannada News

25-05-2017

ಬೆಂಗಳೂರ:- ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಪಾಕಿಸ್ತಾನಿ ಶಂಕಿತರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಾರಸ್ವಾಮಿ ಲೇಔಟ್‌ನಲ್ಲಿ ಅಡಗಿದ್ದ ಪಾಕಿಸ್ತಾನದ ಮಹಿಳೆಯರಾದ ಖಾಸಿಬ್ ಶಂಷುದ್ದೀನ್, ಕಿರಣ್ ಗುಲಾಮಲಿ ಹಾಗೂ  ಮಹಮ್ಮದ್ ಷಿಹಾಬ್ ಎಂಬ ಶಂಕಿತರನ್ನು ದಕ್ಷಿಣ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ತಿಳಿಸಿದರು.
ಬಂಧಿತರು ಖತಾರ್‌ನಿಂದ ಮಸ್ಕಟ್ ಮೂಲಕ ನೇಪಾಳದ ಕಠ್ಮಂಡುವಿಗೆ ಬಂದು ಪಾಟ್ನಾ ಮೂಲಕ ನಗರಕ್ಕೆ ಬಂದು ಈ ಮೂವರು ಕಳೆದ ೯ ತಿಂಗಳುಗಳಿಂದ ವಾಸ್ತವ್ಯ ಹೂಡಿದ್ದರು. ಇವರ ಜೊತೆಗೆ ಕೇರಳದ ಮಹಮ್ಮದ್ ಷಿಹಾಬ್ ಕೂಡ ನೆಲೆಸಿದ್ದನು ಎಂದು ತಿಳಿದು ಬಂದಿದೆ. ಷಿಹಾಬ್ ಖಾಸಿಬ್ ಶಂಷುದ್ದೀನ್ ಸೋದರಿ ಸಮೀರ ಎಂಬಾಕೆಯನ್ನು ವಿವಾಹವಾಗಿರುವ ಮಾಹಿತಿ ದೊರೆತಿದ್ದು, ಇವರೆಲ್ಲರೂ ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ ಮಾಡಿಸಿಕೊಂಡಿದ್ದರು. ಕೇರಳದ ಮಹಮ್ಮದ್ ಷಿಹಾಬ್, ಖಾಸಿಬ್ ಶಂಷುದ್ದೀನ್ ಸೋದರಿಯನ್ನು ದುಬೈನಲ್ಲಿ ವಿವಾಹವಾಗಿ ಮೂವರನ್ನು ನೇಪಾಳದ ಮೂಲಕ ಕರೆತರುವಲ್ಲಿ ಸಹಕರಿಸಿದ್ದ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಬಂಧಿತ ನಾಲ್ವರು ಆಧಾರ್ ಕಾರ್ಡ್, ಗುರುತಿನ ಪತ್ರ ಮಾಡಿಸಿಕೊಂಡು ನಗರದಲ್ಲಿ ಯಾವ ಕಾರಣಕ್ಕೆ ವಾಸ ಮಾಡುತ್ತಿದ್ದರು ಎನ್ನುವುದು ಪತ್ತೆಯಾಗಿಲ್ಲ. ಪಾಕಿಸ್ತಾನದ ನಾಲ್ವರು ಕುಮಾರ ಸ್ವಾಮಿ ಲೇಔಟ್ನ ಮನೆಯೊಂದರಲ್ಲಿ ಅಡಗಿರುವ ಖಚಿತ ಮಾಹಿತಿ ಆಧರಿಸಿ ದಕ್ಷಿಣ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆಯೇ ಇಲ್ಲವೇ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಅವರ ಬಳಿ ವಶಪಡಿಸಿಕೊಂಡಿರುವ ಲ್ಯಾಪ್ಟಾಪ್, ಮೊಬೈಲ್‌ಗಳು ಇನ್ನಿತರ ವಸ್ತುಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ,ಎಸ್.ರವಿ ತಿಳಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ