'ಕಾಂಗ್ರೆಸ್ ಸರ್ಕಾರದ ಯೋಜನೆಗಳು ನಿಲ್ಲಲು ಬಿಡುವುದಿಲ್ಲ’



09-06-2018

ಬಾಗಲಕೋಟೆ: ಅನ್ನಭಾಗ್ಯ ಸೇರಿದಂತೆ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯಾವುದೇ ಯೋಜನೆ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಾದಾಮಿ ಕ್ಷೇತ್ರ ಪ್ರವಾಸ ಸಂದರ್ಭದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಜಾರಿಗೆ ತಂದಿರುವ ಯಾವುದೇ ಜನಪರ ಕಾರ್ಯಕ್ರಮ ನಿಲ್ಲಲು ಬಿಡುವುದಿಲ್ಲ ಎಂದರು.

ಚುನಾವಣೆಯಲ್ಲಿ ನಮಗೆ ಸೋಲಾಗಿರಬಹುದು. ಆದರೆ, ಅಧಿಕಾರದಲ್ಲಿದ್ದಾಗ ಜನರಿಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದ ತೃಪ್ತಿ ಇದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯೂ ಜಾರಿಗೆ ಬರಲಿದೆ. ಈ ಕುರಿತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದರು.  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಇಂದಿರಾ ಕ್ಯಾಂಟೀನ್ ಸೇರಿದಂತೆ ಎಲ್ಲ ಭಾಗ್ಯ ಯೋಜನೆಗಳು ಯಥಾವತ್ತಾಗಿ ಮುಂದುವರಿಯಲಿದೆ ಎಂದರು.

ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಕಡಿತ ಆಗಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತ. ಚುನಾವಣೆ ಬಳಿಕ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

ಜೂನ್ 11ರಂದು ಬಾದಾಮಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ‌ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಎಲ್ಲ ವಿಷಯಗಳ ಬಗ್ಗೆ ಸುಧೀರ್ಘವಾಗಿ ಮಾತನಾಡುತ್ತೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

Siddaramaiah Bus Pass ಪ್ರೋತ್ಸಾಹ ಧನ ಜನಪರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ