ಡಿಸಿಎಂ ಮನೆ ಮುಂದೆ ಶಾಸಕರ ಬೆಂಬಲಿಗರಿಂದ ಧರಣಿ

MLA followers protest in front of the DCM residence

09-06-2018

ಬೆಂಗಳೂರು: ಸಚಿವ ಸ್ಥಾನ ಆಕಾಂಕ್ಷಿಗಳ ಪರ ಲಾಬಿ ಇನ್ನೂ ಮುಂದುವರಿದಿದ್ದು, ಇಂದು ಬೆಳ್ಳಂಬೆಳಿಗ್ಗೆ ಡಿಸಿಎಂ ಜಿ.ಪರಮೇಶ್ವರ್ ಮನೆ ಮುಂದೆ ತಮ್ಮ ನಾಯಕರಿಗೆ ಮಂತ್ರಿಗಿರಿ ನೀಡುವಂತೆ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಸದಾಶಿವನಗರದಲ್ಲಿರು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಿವಾಸದ ಮುಂದೆ ಪರಿಷತ್ ಸದಸ್ಯ ಐವನ್ ಡಿಸೋಜ ಬೆಂಬಲಿಗರು ಹಾಗೂ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಬೆಂಬಲಿಗರು ಜಮಾಯಿಸಿ, ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಐವನ್ ಡಿಸೋಜಗೆ ಮಂತ್ರಿಗಿರಿ ಕೊಡಿ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪರ ಲಾಬಿ ನಡೆಸಲು ಬೆಂಬಲಿಗರು ಡಿಸಿಎಂ ನಿವಾಸಕ್ಕೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು. ಐವನ್ ಡಿಸೋಜ ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ, ಅವರಿಗೆ ಅಲ್ಪಸಂಖ್ಯಾತ ಕೋಟಾದಲ್ಲಿ ಮಂತ್ರಿ ಸ್ಥಾನ ನೀಡುವಂತೆ ಬೆಂಬಲಿಗರ ನಿಯೋಗ ಪರಮೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಐವನ್ ಡಿಸೋಜ ಪರ ಬೆಂಬಲಿಗರು ಘೋಷಣೆಗಳನ್ನು ಕೂಗಿದರು.

ಈ ವೇಳೆ ಡಿಸಿಎಂ ಪರಮೇಶ್ವರ್ ಮಾತನಾಡಿ, ಐವನ್ ಡಿಸೋಜ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕರನ್ನಾಗಿ ಮಾಡಲಾಗಿದೆ. ಮುಂದೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗುವುದು ಎಂದು ಬೆಂಬಲಿಗರಿಗೆ ಭರವಸೆ ನೀಡಿದರು.

ವಿ.ಮುನಿಯಪ್ಪ ಪರ ದರಣಿ: ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಬೆಂಬಲಿಗರು ಡಿಸಿಎಂ ಜಿ.ಪರಮೇಶ್ವರ್ ಮುಂದೆ ಸಚಿವ ಸ್ಥಾನಕ್ಕಾಗಿ ಪ್ರತಿಭಟನೆ ನಡೆಸಿದರು.‌ ನೂರಾರು ಬೆಂಬಲಿಗರು ಡಿಸಿಎಂ ನಿವಾಸದ ಮುಂದೆ ಜಮಾಯಿಸಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪಗೆ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿದರು.

ನಮ್ಮ ಶಾಸಕ ಏಳು ಬಾರಿ ಶಾಸಕರಾಗಿ ಚುನಾಯಿತರಾಗಿದ್ದು, ಪಕ್ಷಕ್ಕಾಗಿ ದುಡಿದಿದ್ದಾರೆ. ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಮೈತ್ರಿಕೂಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

G.Parameshwara protest ವಿ.ಮುನಿಯಪ್ಪ ಚುನಾಯಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ