ಬಂಡಾಯದ ಕಿಚ್ಚು ಹಚ್ಚಲಿದೆಯಾ ಅತೃಪ್ತ ಕೈ ಶಾಸಕರ ಸಭೆ?

congress MLAs separate meeting next week?

07-06-2018

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಮಂತ್ರಿ ಸ್ಥಾನ ಸಿಗದ ರೋಷನ್‍ ಬೇಗ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್ ಸೇರಿ ಹದಿನೈದಕ್ಕೂ ಹೆಚ್ಚು ಮಂದಿ ನಾಯಕರು ಮುಂದಿನ ವಾರ ಮಹತ್ವದ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿದ್ದು, ಮಂತ್ರಿ ಮಂಡಲ ವಿಸ್ತರಣೆಯ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸದ ಕೈ ಪಾಳೆಯದ ನೀತಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಕುರಿತು ತಮ್ಮದೇ ಅಭಿಪ್ರಾಯಕ್ಕೆ ಬಂದಿರುವ ಈ ನಾಯಕರು ಬಂಡಾಯದ ಕಹಳೆ ಮೊಳಗಿಸಲು ತೀರ್ಮಾನಿಸಿದ್ದಾರೆ.

ಮಂತ್ರಿಗಳಾಗಿರುವವರ ಪೈಕಿ ಬಹುತೇಕರು ಅನುಭವಿಗಳೂ ಅಲ್ಲ, ಪಕ್ಷಕ್ಕೆ ಮಹತ್ವದ ಸೇವೆ ಸಲ್ಲಿಸಿದವರೂ ಅಲ್ಲ, ನಾವು ಪಕ್ಷ ಕಷ್ಟ ಕಾಲದಲ್ಲಿದ್ದಾಗ ನಿರಂತರವಾಗಿ ಕೆಲಸ ಮಾಡಿದ್ದೇವೆ. ಪಕ್ಷ ಕಟ್ಟಿದ್ದೇವೆ. ಆದರೆ ನಮ್ಮನ್ನು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಿರ್ಲಕ್ಷಿಸಲಾಗಿದೆ ಎಂಬುದು ಇವರ ಅಸಮಾಧಾನ.

ಈ ಮಧ್ಯೆ ರೋಷನ್ ಬೇಗ್ ಅವರ ಬೆಂಬಲಿಗರು ಇಂದು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಛೇರಿಯ ಮುಂದೆ ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರಲ್ಲದೆ ತಕ್ಷಣವೇ ರೋಷನ್ ಬೇಗ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ರೋಷನ್ ಬೇಗ್ ಅವರು ಪಕ್ಷದ ಪ್ರಮುಖ ನಾಯಕ.ಆದರೆ ಅವರನ್ನು ಹೊರತುಪಡಿಸಿ, ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿಗಿರಿಯ ಅವಕಾಶ ಕಲ್ಪಿಸಲಾಗಿದೆ. ಅವರು ಪಕ್ಷಕ್ಕೆ ಸಲ್ಲಿಸಿರುವ ಸೇವೆ ಏನು? ಅಂತ ಹಲ ಪ್ರತಿಭಟನಾಕಾರರು ಕೇಳುತ್ತಿದ್ದುದು ಕಂಡು ಬಂತು.

ಇದೇ ರೀತಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿ ನಂಬರ್ 2ಅನ್ನಿಸಿಕೊಂಡಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸದ ಕಾಂಗ್ರೆಸ್ ಧೋರಣೆಯ ಬಗ್ಗೆ ರೆಡ್ಡಿ ಸಮುದಾಯದ ಸಾವಿರಾರು ಮಂದಿ ಹಲವೆಡೆ ಪ್ರತಿಭಟನೆ ನಡೆಸಿದರು. ನಿನ್ನೆ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರ ಬೆಂಬಲಿಗರನೇಕರು ಸ್ಥಳೀಯ ಸಂಸ್ಥೆಗಳ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಇನ್ನು ವೀರಶೈವ-ಲಿಂಗಾಯತ ವಿವಾದದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕೂಡಾ ಈಗ ಅಸಮಾಧಾನಕ್ಕೊಳಗಾಗಿದ್ದು ಕಾಂಗ್ರೆಸ್ ನಾಯಕರ ನಿರ್ಲಕ್ಷ್ಯದ ಧೋರಣೆಗೆ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತರಬೇಕಾಗುತ್ತದೆ ಎಂದು ಆಪ್ತರೆದುರು ಹೇಳಿಕೊಂಡಿದ್ದಾರೆ. ನನ್ನನ್ನು ದೂರವಿಟ್ಟು ನನ್ನ ವಿರೋಧಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರ ಹಿಂದಿರುವ ಮರ್ಮವೇ ನನ್ನನ್ನು ಘಾಸಿಗೊಳಿಸಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಧೋರಣೆಯ ವಿರುದ್ಧ ನನ್ನದೇ ನಿಲುವು ತೆಗೆದುಕೊಳ್ಳುತ್ತೇನೆ ಎಂದು ಅವರು ಗುಡುಗಿದ್ದಾರೆ.

ಮಾಜಿ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಕೂಡಾ ಮಂತ್ರಿ ಮಂಡಲಕ್ಕೆ ತಮ್ಮನ್ನು ಸೇರ್ಪಡೆ ಮಾಡದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಮುಂದಿನ ವಾರ ನಡೆಯಲಿರುವ ಬಂಡಾಯ ಸಭೆಯಲ್ಲಿ ಅವರೂ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ದಿನೇಶ್ ಗುಂಡೂರಾವ್ ಕೂಡಾ ಮಂತ್ರಿಗಿರಿಯ ಆಕಾಂಕ್ಷಿಯಾಗಿದ್ದರು. ಅವರು ಕೂಡಾ ಈಗಿನ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ.

ಬ್ರಾಹ್ಮಣ ಸಮುದಾಯದಿಂದ ತಮ್ಮನ್ನು ಮಂತ್ರಿ ಮಾಡಿದ್ದರೆ ಪಕ್ಷಕ್ಕೆ ಒಂದು ಮಟ್ಟದಲ್ಲಿ ಲಾಭವಾಗುತ್ತಿತ್ತು. ಈಗಾಗಲೇ ಬಿಜೆಪಿಯ ಕಡೆ ವಾಲಿರುವ ಸಮುದಾಯವನ್ನು ಸಾಧ್ಯವಾದ ಮಟ್ಟಿಗೆ ಕೈ ಪಾಳೆಯದತ್ತ ಸೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಈಗಿನ ಬೆಳವಣಿಗೆ ಅದಕ್ಕೆ ಪೂರಕವಾಗಿಲ್ಲ. ನಾನು ಕೂಡಾ ಹಿಂದೆ ಮಂತ್ರಿಯಾಗಿದ್ದವನು.ಈ ಸಲ ತಮಗೂ ಮಂತ್ರಿಗಿರಿ ನೀಡಬೇಕಿತ್ತು ಎಂದು ಅವರು ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ. ಈ ಎಲ್ಲದರ ನಡುವೆ ತಾವು ಮಂತ್ರಿಯಾಗದೆ ಇರಲು ಯಾವ ನಾಯಕರು ಕಾರಣ?ಎಂದು ಪತ್ತೆ ಮಾಡುವಲ್ಲಿ ಹಲವು ನಾಯಕರು ತಲ್ಲೀನರಾಗಿದ್ದು, ತಮಗೆ ಮಂತ್ರಿಗಿರಿ ತಪ್ಪಿಸಲು ಇಂತವರೇ ಕಾರಣ ಎಂದು ಆಂತರಿಕ ವಲಯಗಳಲ್ಲಿ ಬಾಂಬು ಸಿಡಿಸತೊಡಗಿದ್ದಾರೆ.

ಹೀಗೆ ಕಾಂಗ್ರೆಸ್ ಪಕ್ಷದ ಒಳವಲಯದಲ್ಲಿ ಎದ್ದ ಅಸಮಾಧಾನ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು ಇದರ ಬೆನ್ನಲ್ಲೇ ಮುಂದಿನ ವಾರ ಹದಿನೈದಕ್ಕೂ ಹೆಚ್ಚು ಮಂದಿ ಅತೃಪ್ತರು ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇನೂ ಅಪ್ರತಿಭರಾಗದಿದ್ದರೂ ಕಾಂಗ್ರೆಸ್ ವರಿಷ್ಠರ ಪಾಲಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

 


ಸಂಬಂಧಿತ ಟ್ಯಾಗ್ಗಳು

R. Roshan Baig dinesh gundu rao ಅಸಮಾಧಾನ ವ್ಯಾಪಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • nkbbpjhceu
  • fifdxhjcou