ಹೆಚ್.ಎಂ ರೇವಣ್ಣಗೆ ಬಿಜೆಪಿ ಗಾಳ!

BJP trying to talk with H.M Revanna?

07-06-2018

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಬಂಡಾಯದ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಇದೀಗ ಕುರುಬ ಸಮುದಾಯದ ನಾಯಕ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರನ್ನು ಸೆಳೆಯಲು ಮುಂದಾಗಿದೆ.

ಸಚಿವ ಸ್ಥಾನ ಸಿಗದೆ ತೀವ್ರ ಅಸಮಾಧಾನ ಅತೃಪ್ತಿ ವ್ಯಕ್ತಪಡಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣನವರಿಗೆ ಬಿಜೆಪಿ ಗಾಳ ಹಾಕಿದ್ದು ಪಕ್ಷಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಸರ್ಕಾರ ರಚಿಸಿದಾಗ ಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಿದೆ. ಕುರುಬ ಸಮಾಜದ ಪ್ರಭಾವಿ ಮುಖಂಡ ಹೆಚ್.ಎಂ.ರೇವಣ್ಣ ಅವರು ಬಿಜೆಪಿಗೆ ಸೇರ್ಪಡೆಗೊಂಡರೆ ಇಡೀ ಕುರುಬ ಸಮಾಜದ ಬೆಂಬಲ ದೊರೆಯಲಿದೆ ಎಂಬ ನಿರ್ಧಾರಕ್ಕೆ ಬಿಜೆಪಿ ರಾಜ್ಯ ನಾಯಕರು ಬಂದಿದ್ದಾರೆ ಎಂಬುದು ಮೂಲಗಳ ಹೇಳಿಕೆ.

ನಿನ್ನೆಯಿಂದ ದೂರವಾಣಿ ಮೂಲಕ ಬಿಜೆಪಿ ಮುಖಂಡರು ಹಲವು ಸುತ್ತಿನ ಮಾತುಕತೆ ನಡೆದಿದ್ದು, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ರೇವಣ್ಣ ಹಾಗೂ ಈಶ್ವರಪ್ಪ ಅವರ ನೇತೃತ್ವದಲ್ಲಿ ಕುರುಬ ಸಮಾಜದ ಸಹಕಾರವನ್ನು ಪಡೆಯಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ.

ಕುರುಬರನ್ನು ಸಚಿವ ಸ್ಥಾನ ನೀಡುವಲ್ಲಿ ಕಡೆಗಣಿಸಿರುವ ಕಾಂಗ್ರೆಸ್ ಪಕ್ಷದ ನಿಲುವಿನಿಂದ ಇಡೀ ಕುರುಬ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸನ್ನಿವೇಶವನ್ನು ಸದುಪಯೋಗ ಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಕಳೆದ 30ವರ್ಷದಿಂದ ರಾಜ್ಯದ ಪ್ರತಿ ಗ್ರಾಮಗಳನ್ನು ಸುತ್ತಿ ಕುರುಬ ಸಮಾಜವನ್ನು ಒಗ್ಗೂಡಿಸಿ ಕುರುಬ ಸಮುದಾಯದ ಮಠಗಳನ್ನು ಸ್ಥಾಪಿಸುವಲ್ಲಿ ರೇವಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಈ ಸಮಾಜದ ಜನ ಯಾವುದೇ ಸಮಸ್ಯೆ ಇದ್ದರೂ ರೇವಣ್ಣ ಅವರನ್ನು ಭೇಟಿಯಾಗಿ ಪರಿಹರಿಸಿಕೊಳ್ಳುತ್ತಾರೆ. ರೇವಣ್ಣನವರು ಈ ಸಮಾಜದ ಪ್ರಮುಖ ನಾಯಕನಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಮಂತ್ರಿ ಮಂಡಲ ರಚನೆಯ ಸಂದರ್ಭದಲ್ಲಿ ರೇವಣ್ಣ ಅವರಿಗೆ ಅವಕಾಶ ಲಭ್ಯವಾಗದೇ ಇರುವುದರಿಂದ ರಾಜ್ಯದಲ್ಲಿರುವ ಕುರುಬ ಸಮುದಾಯದ ಪ್ರಮುಖರು, ನಿಮ್ಮ ಮುಂದೆ ಇರುವ ಅವಕಾಶಗಳನ್ನು ಪಡೆಯಿರಿ. ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಿ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.M Revanna BJP ಸಂಪುಟ ವಿಸ್ತರಣೆ ಬಂಡಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ