ಇನ್ಮುಂದೆ ಬೇಕಾಬಿಟ್ಟಿ ನೀರು ಪೋಲು ಮಾಡುವಂತಿಲ್ಲ?

karnataka may the first state to form water policy?

07-06-2018

ಬೆಂಗಳೂರು: ರಾಜ್ಯದ ಜನ ಇನ್ನು ಮುಂದೆ ನೀರನ್ನು ಬೇಕಾಬಿಟ್ಟ ಪೋಲು ಮಾಡುವಂತಿಲ್ಲ. ಬದಲಿಗೆ ತಮಗೆ ಹಂಚಿಕೆಯಾಗುವ ಪ್ರಮಾಣದಷ್ಟೇ ನೀರನ್ನು ಬಳಸಬೇಕು ಎಂಬ ಅಂಶವನ್ನು ಒಳಗೊಂಡ ಕರ್ನಾಟಕ ಜಲ ನೀತಿ ಮುಂದಿನ ಹದಿನೈದು ದಿನಗಳಲ್ಲಿ ಕೇಂದ್ರ ಸರ್ಕಾರದೆದುರು ಮಂಡನೆಯಾಗಲಿದೆ.

ದೇಶದಲ್ಲೇ ಜಲ ನೀತಿಯನ್ನು ರೂಪಿಸುತ್ತಿರುವ ಮೊಟ್ಟ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮುತ್ತಿದ್ದು ಇದರಡಿ ರಾಜ್ಯದಲ್ಲಿ ವಿವಿಧ ಮೂಲಗಳಿಂದ ಲಭ್ಯವಿರುವ ನೀರಿನ ಪ್ರಮಾಣವನ್ನು ಗುರುತಿಸಿ, ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ನೀರನ್ನು ಒದಗಿಸಬೇಕು?ಎಂಬ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಪರಿಣಾಮವಾಗಿ ಇನ್ನು ಮುಂದೆ ದೊಡ್ಡ ದೊಡ್ಡ ಕಟ್ಟಡಗಳನ್ನು ತೊಳೆಯಲು, ಕಾರು ತೊಳೆಯಲು, ವಾಹನಗಳನ್ನು ತೊಳೆಯಲು ಸೇರಿದಂತೆ ಹಲ ವಿಷಯಗಳಲ್ಲಿ ಬೇಕಾಬಿಟ್ಟಿಯಾಗಿ ನೀರು ಬಳಕೆ ಮಾಡುವಂತಿಲ್ಲ. ಮಾಡಲು ಹೋದರೆ ನಿಸ್ಸಂಶಯವಾಗಿ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜ್ಞಾನ ಆಯೋಗದ ಅಧ್ಯಕ್ಷ ಕಸ್ತೂರಿ ರಂಗನ್ ಅವರು, ಮುಂದಿನ ಹದಿನೈದು ದಿನಗಳಲ್ಲಿ ಕರ್ನಾಟಕ ಜಲ ನೀತಿಯನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದರು.

ದೇಶದಲ್ಲಿ ಜಲನೀತಿಯನ್ನು ರೂಪಿಸುತ್ತಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದ ಅವರು,ಈ ನೀತಿ ರಾಜ್ಯದಲ್ಲಿ ವಿವಿಧ ಮೂಲಗಳಿಂದ ಲಭ್ಯವಿರುವ ನೀರಿನ ಪ್ರಮಾಣದ ವಿವರ ಇಟ್ಟುಕೊಂಡು ಯಾವ್ಯಾವ ವಲಯಗಳಿಗೆ ಎಷ್ಟೆಷ್ಟು ನೀರು ಒದಗಿಸಬೇಕು?ಎಂಬುದನ್ನು ನಿರ್ಧರಿಸುತ್ತದೆ ಎಂದು ವಿವರಿಸಿದರು.

ಯಾವ ವಲಯಕ್ಕೆ ಎಷ್ಟು ನೀರು ಹಂಚಿಕೆಯಾಗುತ್ತದೋ?ಅಷ್ಟು ಪ್ರಮಾಣದ ನೀರನ್ನು ಆ ವಲಯ ಬಳಸಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ನೀರನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡಲು ಸಾಧ್ಯವಿಲ್ಲ.ಇದುವರೆಗೂ ನಡೆದುಕೊಂಡು ಬಂದಂತೆ ಮುಂದಿನ ದಿನಗಳಲ್ಲಿ ನೀರಿನ ಪೋಲು ಕಾರ್ಯನಡೆಯಲು ಸಾಧ್ಯವಿಲ್ಲ ಎಂದರು.

ಈ ಮಧ್ಯೆ ಕಾವೇರಿ ನದಿಯ ಇತಿಹಾಸವನ್ನು ಹೇಳುವ ಮಹತ್ವದ ಕಾವೇರಿ ಗ್ಯಾಲರಿಯನ್ನು  ಮೈಸೂರಿನಲ್ಲಿ ಸ್ಥಾಪಿಸುವುದಾಗಿ ಹೇಳಿದ ಅವರು, ಈ ಸಂಬಂಧ ಎಲ್ಲ ಪ್ರಕ್ರಿಯೆಗಳು ಆರಂಭಗೊಂಡಿದ್ದು ಸಧ್ಯದಲ್ಲೇ ಮುಗಿಯಲಿದೆ ಎಂದು ಹೇಳಿದರು.

ಕಾವೇರಿ ಗ್ಯಾಲರಿಯಲ್ಲಿ ಕಾವೇರಿ ನದಿಯ ಇತಿಹಾಸದಿಂದ ಹಿಡಿದು ಇದುವರೆಗಿನ ಎಲ್ಲ ಬೆಳವಣಿಗೆಗಳ ವಿವರ ಲಭ್ಯವಾಗಲಿದೆ. ಆ ಮೂಲಕ ಮುಂದಿನ ಪೀಳಿಗೆಗೆ ಕಾವೇರಿ ನದಿಯ ಇತಿಹಾಸ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ಜ್ಞಾನ ಆಯೋಗದ ಅಧ್ಯಕ್ಷರಾಗಿ ತಮ್ಮ ಕಾರ್ಯಾವಧಿ ಮುಗಿದಿದ್ದು ಈ ಹಿನ್ನೆಲೆಯಲ್ಲಿ ನಿವೃತ್ತನಾಗಲು ನಾನು ಸಜ್ಜಾಗಿದ್ದೆ. ಆರೋಗ್ಯದ ಕಾರಣವೂ ಇದರಲ್ಲಿತ್ತು. ಆದರೆ, ಮುಖ್ಯಮಂತ್ರಿಗಳು ನೀವು ಮುಂದುವರಿಯಬೇಕು ಎಂದು ಬಯಸಿದ್ದರಿಂದ ನಾನು ಅಧಿಕಾರದಲ್ಲಿ ಮುಂದುವರಿಯುತ್ತಿದ್ದೇನೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತನಾಡಿ, ಕಸ್ತೂರಿ ರಂಗನ್ ಅವರು ಆರೋಗ್ಯದ ಕಾರಣ ಹೇಳಿ ನಿವೃತ್ತಿ ಬಯಸುತ್ತಿದ್ದಾರೆ. ಆದರೆ, ನಾಡಿಗೆ ಅವರ ಜ್ಞಾನದ ಅಗತ್ಯವಿದೆ ಎಂದು ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

Kasturirangan Knowledge commission ಜ್ಞಾನ ಆಯೋಗ ಜಲನೀತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ