ಹೆಚ್ಡಿಕೆ ಮತ್ತು ಬಿಎಸ್ ವೈ ನಡುವೆ ‘ಹೆಲಿಕಾಪ್ಟರ್’ ರಾಜಕೀಯ!

yeddyurappa written a letter to CM Kumaraswamy!

07-06-2018

ಬೆಂಗಳೂರು: ಹೆಲಿಕಾಪ್ಟರ್ ಪ್ರಯಾಣಕ್ಕೆ ಭಾರೀ ವೆಚ್ಚ ಪ್ರಕರಣ ಈಗ ಹಾಲಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ನಡುವೆ ಸಂಘರ್ಷಕ್ಕೆ ವೇದಿಕೆ ಒದಗಿಸಿದೆ. ಹೆಲಿಕಾಪ್ಟರ್ ಪ್ರಯಾಣದ ವೆಚ್ಚ ಭರಿಸುವುದಾಗಿ ಯಡಿಯೂರಪ್ಪ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಉಸ್ತುವಾರಿ ಮುಖ್ಯಮಂತ್ರಿ ಆಗಿದ್ದ ವೇಳೆ ಲಿಂಗೈಕ್ಯರಾಗಿದ್ದ ಡಾ.ಮಹಾಂತ ಶಿವಯೋಗಿಗಳಿಗೆ ಗೌರವ ಸಲ್ಲಿಸಲು ಹೆಲಿಕಾಪ್ಟರ್ ಬಳಸಿ ದುಂದು ವೆಚ್ಚ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಸಿಎಂ ಹೇಳಿಕೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಈಗಲೂ ನಾನು ಪ್ರಯಾಣದ ವೆಚ್ಚ ಭರಿಸಲು ಸಿದ್ಧನಿದ್ದೇನೆ ಎಂದು ಸಿಎಂಗೆ ಖಾರವಾಗಿ ಪತ್ರ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್‌ನ ಡಾ.ಮಹಾಂತ ಶಿವಯೋಗಿಗಳು ಲಿಂಗೈಕ್ಯರಾಗಿದ್ದ ವೇಳೆ ಉಸ್ತುವಾರಿ ಸಿಎಂ ಆಗಿ ನನ್ನ ಕರ್ತವ್ಯ ಎಂದು ತಿಳಿದು ಮೇ 2ರಂದು ಅಲ್ಲಿಗೆ ಹೋಗಿ ಗೌರವ ಸಲ್ಲಿಕೆ ಮಾಡಿದ್ದೆ. ನಂತರ ದಾವಣಗೆರೆ ಜಿಲ್ಲೆ‌ಯ ಚನ್ನಗಿರಿ ತಾಲ್ಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ನನಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ನನ್ನ ಪ್ರಮುಖ ವಾಸ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ನೀಡಿದ್ದೆ. ಆದರೆ ಭಾಷಣದಲ್ಲಿ ಹಗುರವಾಗಿ ಮಾತನಾಡಿರುವುದು ಅತ್ಯಂತ ಖೇದ ತಂದಿದೆ ಎಂದು ಪತ್ರದಲ್ಲಿ ಅಸಮಧಾನ ಹೊರಹಾಕಿದ್ದಾರೆ. ಉಸ್ತುವಾರಿ ಸಿಎಂ ಆಗಿ ಅಂದು ನಾನು ಹೋಗಿದ್ದೆ. ಸಂದರ್ಭದ ಸೂಕ್ಷ್ಮತೆಯನ್ನು ತಿಳಿದುಕೊಳ್ಳದೇ ಒಬ್ಬ ರೈತನ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದೆ, ಧರ್ಮಗುರುಗಳ ಅಂತಿಮ ನಮನಕ್ಕೆ ಹೋಗಿದ್ದ ವಿಷಯವನ್ನು ದುಂದುವೆಚ್ಚ ಎನ್ನುವುದಕ್ಕೆ‌ ಬಳಸಿಕೊಂಡಿದ್ದು ಸರಿಯೇ ಎಂದು ಮುಖ್ಯಮಂತ್ರಿಗಳನ್ನು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ನೀವು ಕುಚೋದ್ಯದ, ಅಹಂಕಾರದ ಹೇಳಿಕೆ ನೀಡುವುದನ್ನು ಇನ್ನು ಮುಂದಾದರೂ ನಿಲ್ಲಿಸಿ. ಇಂತಹ ಹೇಳಿಕೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ರೈತರ ಸಾಲಮನ್ನಾ ಮಾಡಿ ನಿಮ್ಮ ರಾಜಕೀಯ ನೈಪುಣ್ಯತೆ ಪ್ರದರ್ಶಿಸಿ ಎಂದು ಪತ್ರದ ಮೂಲಕ‌ ಯಡಿಯೂರಪ್ಪ ಆಗ್ರಹ‌ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ