ದೆಹಲಿಯಲ್ಲಿ ಶಿಶು ಕಾಮಿಗಳ ಹೆಚ್ಚಳ: 500 ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾತ ಅರೆಸ್ಟ್

Kannada News

26-01-2017

ನವದೆಹಲಿ: ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಶುಕಾಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ದೆಹಲಿಯಲ್ಲಿ ಸಿಕ್ಕಿಬಿದ್ದಿರುವ ಶಿಶುಕಾಮಿಯ ಕೃತ್ಯಗಳನ್ನು ತಿಳಿದು ರಾಷ್ಟ್ರ ರಾಜಧಾನಿ ಬೆಚ್ಚಿಬಿದ್ದಿದೆ. 7 ರಿಂದ 11 ವರ್ಷದ ಬಾಲಕಿಯರನ್ನೇ ಗುರಿಯಾಗಿಸಿಕೊಂಡು, ಅತ್ಯಾಚಾರ ಎಸಗಿ ಪರಾರಿಯಾಗುತ್ತಿದ್ದ ಸುನಿಲ್ ರಸ್ತೋಗಿ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಕಳೆದ 13 ವರ್ಷಗಳಲ್ಲಿ 500ಕ್ಕೂ ಹೆಚ್ಚು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನಂತೆ. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಈತ ಶಾಲಾ ಮಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಉತ್ತರ ಪ್ರದೇಶ, ಉತ್ತರಾಖಂಡ್ ಗಳಲ್ಲೂ ಈಗ  ಪುಟ್ಟ ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನಂತೆ. ಈತನ ವಿಕೃತ ಕಾಮಕ್ಕೆ ನೂರಾರು ಮಕ್ಕಳು ಬಲಿಯಾಗಿದ್ದಾರೆ. ಅಂದಹಾಗೆ ಈ ರೀತಿಯ ಅತ್ಯಾಚಾರ ಪ್ರಕರಣಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಹೆಚ್ಚಾಗಿ ನಡೆಯುತ್ತಿದ್ದು, ಜನರ  ಆತಂಕಕ್ಕೆ ಕಾರಣವಾಗಿದೆ. ಪೊಲೀಸರ ಮಾಹಿತಿ ಪ್ರಕಾರ 2014ರಲ್ಲಿ ದೆಹಲಿಯಲ್ಲಿ 9,350 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಅದೇ ವರ್ಷ 1004 ಮಕ್ಕಳ ಮೇಲೆ ಅತ್ಯಾಚಾರವಾಗಿತ್ತು. 2015ರಲ್ಲಿ 9,983  ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಿದ್ದವು. ಇದರಲ್ಲಿ 927 ಕೇಸ್ ಗಳು ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಾಗಿದ್ದವು. ಇನ್ನು 2016ರಲ್ಲೂ ಇಂತಹ ನೂರಾರು ಪ್ರಕರಣಗಳು ದೆಹಲಿಯಲ್ಲಿ ನಡೆದಿವೆ.

  • 2016ರ ಮಾರ್ಚ್ 25ರಂದು 13 ವರ್ಷದ ಬಾಲಕಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಾಲಕಿಯನ್ನು ಪಕ್ಕದ ಮನೆಯವನೇ ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಎಸಗಿ ರೈಲ್ವೇ ಟ್ರ್ಯಾಕ್ ಬಳಿ ಎಸೆದು ಹೋಗಿದ್ದ. ತೀವ್ರ ಅಸ್ವಸ್ಥಳಾಗಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.
  • 2016ರ ಜುಲೈ 23ರಂದು 14 ವರ್ಷದ ದಲಿತ ಬಾಲಕಿಯ ಮೇಲೆ ಪಕ್ಕದ ಮನೆಯವ ವ್ಯಕ್ತಿಯೇ ನಾಲ್ಕೈದು ಬಾರಿ ಅತ್ಯಾಚಾರವೆಸಗಿದ್ದ. ಆಕೆ ಕೂಡಾ ತೀವ್ರ ಅಸ್ವಸ್ಥಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
  • ಜುಲೈ 25ರಂದು ಕೇವಲ ನಾಲ್ಕು ವರ್ಷದ ಬಾಲಕಿಯ ಮೇಲೆ ದೆಹಲಿಯ ಶಾಹ್ ಬಾದ್ ಡೈರಿ ಬಳಿ ಅತ್ಯಾಚಾರವೆಸಗಲಾಗಿತ್ತು. ಪಕ್ಕದ ಮನೆಯವನೇ ಆದ 28 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದ. ಈಗ ಆತ ಜೈಲು ಸೇರಿದ್ದಾನೆ.
  • ಸೆಪ್ಟೆಂಬರ್ 3ರಂದು ಪಶ್ಚಿನ ದೆಹಲಿಯ ವಿಕಾಸ್ ಪುರಿಯಲ್ಲಿ 11 ತಿಂಗಳ ಹಸುಳೆ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈ ಕೃತ್ಯವೂ ಪಕ್ಕದ ಮನೆಯವನಿಂದಲೇ ನಡೆದಿತ್ತು.
  • ನವೆಂಬರ್ 21ರಂದು ದೆಹಲಿಯ ಕೇಶವಪುರಂನಲ್ಲಿ ನಾಲ್ಕು ವರ್ಷದ ಬಾಲಕಿಯ ಕೊಲೆಯಾಗಿತ್ತು. ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪಕ್ಕದ ಮನೆಯ ವ್ಯಕ್ತಿ ಆ ಬಾಲಕಿಯನ್ನು ಹೊತ್ತೊಯ್ಯುತ್ತಿದ್ದದ್ದು ಸೆರೆಯಾಗಿತ್ತು.
  • ಡಿಸೆಂಬರ್ 16ರಂದು ದೆಹಲಿಯ ಕಜೂರಿ ಕಾಸ್ ಬಳಿಯಿಂದ ಇಬ್ಬರು ವ್ಯಕ್ತಿಗಳು 13 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದರು. ಆ ಬಾಲಕಿಯನ್ನು ಹತ್ತಿರದಲ್ಲೇ ಇದ್ದ ಅಂಗಡಿಯೊಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಲಾಗಿತ್ತು. ಬಾಲಕಿಯನ್ನು ಅಂಗಡಿಯೊಳಗೆ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿದ ಸ್ಥಳೀಯರು, ಬಾಲಕಿಯ ಪೋಷಕರಿಗೆ ವಿಷಯ ಮುಟ್ಟಿಸಿದ್ದರು.
  • ಡಿಸೆಂಬರ್ 24ರಂದು ಪೂರ್ವ ದೆಹಲಿಯ ಗೀತಾ ಕಾಲೋನಿಯಲ್ಲಿ 60 ವರ್ಷದ ಆಟೋ ಚಾಲಕನೊಬ್ಬ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈತ ಅದೇ ಬಾಲಕಿ ಮೇಲೆ 2016ರ ಅಕ್ಟೋಬರ್ ನಲ್ಲೂ ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾಗಿದ್ದ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ